ಜಿಲ್ಲೆ

ನಾಡಹಬ್ಬದ ಕಲ್ಪನೆ ಕೊಟ್ಟ ಬೆಟಗೇರಿ ಕೃಷ್ಣಶರ್ಮ, ಕವಿ ಎಸ್.ಬಿ. ಶಿವಳ್ಳಿ ಬಣ್ಣನೆ


ನರಗುಂದ: ನಾಡ ಅಭಿಮಾನ ಎಚ್ಚರಿಸಲು ನಾಡಹಬ್ಬದ ಆಚರಣೆ ಎಂಬ ಕಲ್ಪನೆ ಕೊಟ್ಟ ಮೊದಲಿಗರು ಬೆಟಗೇರಿ ಕೃಷ್ಣಶರ್ಮರು ಎಂದರೆ ತಪ್ಪಾಗಲಾರದು. ಅದಕ್ಕಾಗಿ ಇವರು ಕನ್ನಡ ನಾಡು ಸುತ್ತಿದ ಕರುನಾಡಿನ ಕಂದ. ಆನಂದಕಂದ ಎಂಬ ಕಾವ್ಯನಾಮದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಗ್ರಾಮೀಣ ಸೊಗಡಿನ ಪದ್ಯಗಳನ್ನು ರಚಿಸಿದ ದೇಶಿಯ ಕವಿ ಎಂದು ಸಂಪನ್ಮೂಲ ವ್ಯಕ್ತಿ ಎಸ್.ಬಿ. ಶಿವಳ್ಳಿ ಬಣ್ಣಿಸಿದರು.


ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸುವರ್ಣ ಸಂಭ್ರಮದ ಸ್ಮರಣೆಯಲ್ಲಿ ಏಕೀಕರಣ ಯೋಧರ ಯಶೋಗಾಥೆ-18 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಬಾಲ್ಯದಿಂದಲೇ ಸಾಹಿತ್ಯದ ಮೇಲೆ ಅಪಾರ ಆಳ ಹೊಂದಿದ್ದ ಅವರು, ಕವನ ರಚನೆ ಪ್ರಾರಂಭಿಸಿದರು. ಮುಂದೆ ಸಾಹಿತ್ಯ ಸೇವೆಯ ಜತೆಗೆ ರಾಷ್ಟಿ›ೕಯ ಚಳುವಳಿಗಾಗಿ, ಕನ್ನಡ ಸ್ವಯಂಸೇವಕರಿಗಾಗಿ, ಕಾಂಗ್ರೆಸ್ ಅಧಿವೇಶನಗಳಿಗಾಗಿ ಕವನ ರಚಿಸಿ ಕೊಟ್ಟು ಸ್ವಾತಂತ್ರ್ಯ ಜಾಗೃತಿ ಮೂಡಿಸುತ್ತಿದ್ದರು. ಅವರ ಪ್ರಥಮ ಕವನ ‘ಭಕ್ತಿ ಕುಸುಮಾವಳಿ 1918ರಲ್ಲಿ ಪ್ರಭಾತ’ ಪತ್ರಿಕೆಯಲ್ಲಿ ಪ್ರಕಟವಾಯಿತು. ಕೇವಲ ಕನ್ನಡ ಮುಲ್ಕಿ ಪರೀಕ್ಷೆಯನ್ನು ಮಾಡಿಕೊಂಡ ಕೃಷ್ಣ ಶರ್ಮರು ಕನ್ನಡ ಸಾಹಿತ್ಯ ಲೋಕದಲ್ಲಿ ದೃವತಾರೆಯಾಗಿ ಮೆರೆದು ಇಂದಿಗೂ ಕನ್ನಡಿಗರ ಮನಸಿನಲ್ಲಿ ಅಜರಾಮರವಾಗಿದ್ದಾರೆ ಎಂದರು.


ಸಾನ್ನಿಧ್ಯ ವಹಿಸಿದ್ದ ಪೂಜ್ಯ ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿ, ಗ್ರಾಮೀಣ ಹಿನ್ನೆಲೆಯಲ್ಲಿ ತಮ್ಮದೆಯಾದ ವಿಶಿಷ್ಠ ಶೈಲಿಯೊಂದಿಗೆ ಕನ್ನಡ ಸಾಹಿತ್ಯ ಕೃಷಿ ಮಾಡಿದ ಬೆಟಗೇರಿ ಕೃಷ್ಣಶರ್ಮರು, ಈ ನಾಡು ಕಂಡ ಶ್ರೇಷ್ಠ ಸಾಹಿತಿಗಳು. ಜಯಂತಿ ಪತ್ರಿಕೆ ಮೂಲಕ ಹಲವಾರು ಕವಿ, ಸಾಹಿತಿಗಳನ್ನು ಈ ನಾಡಿಗೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.


ಅಭಿನವ ಯಚ್ಚರಸ್ವಾಮಿಗಳು, ಡಾ. ಗುರುಬಸವ ದೇವರು ಆಶೀರ್ವಚನ ನೀಡಿದರು. ಸಂಪನ್ಮೂಲ ವ್ಯಕ್ತಿ ಎಸ್.ಬಿ. ಶಿವಳ್ಳಿ, ನಿವೃತ್ತ ಶಿಕ್ಷಕ ಎಸ್.ಬಿ. ದಂಡಿನ, ಎಸ್.ಬಿ. ಪಾಟೀಲ, ಪ್ರಾಚಾರ್ಯ ಬಿ.ಎಸ್. ಸಾಲಿಮಠ, ಮುಖ್ಯಶಿಕ್ಷಕ ಈರಣ್ಣ ಸೋನಾರ, ಪಾಂಡುರಂಗ ಬಡಿಗೇರ, ಶಿವಪ್ಪ ಬೋಳಶೆಟ್ಟಿ ಪ್ರಮುಖರು ಇದ್ದರು. ಪೋ› ಆರ್ ಬಿ ಚಿನಿವಾಲರ ಕಾರ್ಯಕ್ರಮ ನಿರ್ವಹಿಸಿದರು.