ಜಿಲ್ಲೆ

ಕವಿಗೋಷ್ಠಿಗೆ ಅಂತಾರಾಜ್ಯ ಸ್ಪರ್ಶ ನೀಡಲು ಚಿಂತನೆ

ಮೈಸೂರು: ದಸರಾ ಮಹೋತ್ಸದ ಅಂಗವಾಗಿ ಆಯೋಜಿಸಿಕೊಂಡು ಬರುತ್ತಿರುವ ದಸರಾ ಕವಿಗೋಷ್ಠಿಗೆ ಈ ಬಾರಿ ಅಂತಾರಾಜ್ಯ ಸ್ಪರ್ಶಕ್ಕೆ ಉಪ ಸಮಿತಿ ಚಿಂತನೆ ನಡೆಸಿದೆ.
ಇಷ್ಟು ವರ್ಷಗಳ ಕಾಲ ರಾಜ್ಯದ ಕವಿಗಳನ್ನು ಮಾತ್ರ ಆಹ್ವಾನಿಸಿ ಕವಿತೆ ವಾಚಿಸಲು ಅವಕಾಶ ನೀಡಲಾಗುತ್ತಿತ್ತು. ಗೋಷ್ಠಿಯಲ್ಲಿ ಕೊಡವ, ತುಳು, ಕೊಂಕಣಿ, ಲಂಬಾಣಿ, ಉರ್ದು ಸೇರಿದಂತೆ ಇನ್ನಿತರ ಕರ್ನಾಟಕದಲ್ಲಿರುವ ಉಪ ಭಾಷೆಗಳ ಕವನ ವಾಚನ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಹೀಗೆ ವಾಚನ ಮಾಡುವವರು ರಾಜ್ಯದ ಕವಿಗಳೇ ಆಗಿರುತ್ತಿದ್ದರು.
ಆದರೆ ಈ ಬಾರಿ ದಸರಾ ಕವಿಗೋಷ್ಠಿಗೆ ಹೊಸತನ ನೀಡಬೇಕೆಂಬ ಉದ್ದೇಶದಿಂದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಅಸ್ಸಾಂ, ಬಿಹಾರ ಸೇರಿದಂತೆ ವಿವಿಧ ನಾನಾ ರಾಜ್ಯಗಳಿಂದ ಕವಿಗಳನ್ನು ಕರೆಯಿಸಿ ಕವಿಗೋಷ್ಠಿ ನಡೆಸಲು ಉಪ ಸಮಿತಿ ಚಿಂತನೆ ನಡೆಸಿದೆ. ಆ ಮೂಲಕ ದಸರಾ ಕವಿಗೋಷ್ಠಿಯಲ್ಲಿ ಭಾಷಾ ಸೌಹಾರ್ದತೆ ಸಾರಲು ಮುಂದಾಗಿದೆ.
ಹೊರ ರಾಜ್ಯದವರನ್ನು ಆಹ್ವಾನಿಸುವುದರಿಂದ ಕವಿತೆಗಳ ವ್ಯಾಪ್ತಿ ಹಿಗ್ಗುವುದಲ್ಲದೆ ರಾಜ್ಯಗಳ ನಡುವೆ ಸೌಹಾರ್ದ ಬೆಳೆಯುತ್ತದೆ. ಜತೆಗೆ ನಾಡಹಬ್ಬ ದಸರಾದ ಮಹತ್ವವೋ ಹೊರ ರಾಜ್ಯಗಳಿಗೂ ಹಬ್ಬುತ್ತದೆ ಎನ್ನುವ ಉದ್ದೇಶವನ್ನು ಸಮಿತಿ ಹೊಂದಿದೆ.
ಚಿಗುರು, ಹಾಸ್ಯ-ಚುಟುಕು, ಮಹಿಳಾ, ಪ್ರಾದೇಶಿಕ, ಉರ್ದು, ಯುವ ಹಾಗೂ ಪ್ರಧಾನ ಕವಿಗೋಷ್ಠಿಗಳಲ್ಲಿ ಈ ಬಾರಿ ಅಂಗವಿಕಲರು, ಅನಾಥರು, ಪೌರಕಾರ್ಮಿಕರು, ಆಟೋ ಚಾಲಕರು, ಬೀದಿಬದಿಯ ವ್ಯಾಪಾರಿಗಳಲ್ಲೂ ಕವಿತೆ ಬರೆಯುವ ಆಸಕ್ತಿ ಇರುತ್ತದೆ. ಹಾಗಾಗಿ ಈ ಬಾರಿಯ ದಸರಾ ಕವಿಗೋಷ್ಠಿಯಲ್ಲಿ ಇವರೆಲ್ಲರಿಗೂ ಅವಕಾಶ ನೀಡಲು ಉಪ ಸಮಿತಿ ನಿರ್ಧರಿಸಿದೆ.