ಜಗಳೂರು: ತಾಲೂಕಿನ ಜ್ಯೋತಿಪುರ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಗಂಗಮ್ಮ ಜಿ. ಬಸವರಾಜ್ ಇದ್ದ ಗುಡಿಸಲು ಬೆಂಕಿಗೆ ಸಂಪೂರ್ಣ ಆಹುತಿಯಾಗಿದೆ.
ಬೆಳಗ್ಗೆ ಜಮೀನಿಗೆ ಕೆಲಸಕ್ಕೆ ಹೋಗಿದ್ದಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದ್ದು ಇಡೀ ಗುಡಿಸಲು ಬೆಂಕಿಗೆ ಸುಟ್ಟಿದೆ. ಸ್ಥಳೀಯರು ನಂದಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಗುಡಿಸಲು ಬಹುತೇಕ ಸುಟ್ಟಿತ್ತು.
ಇತ್ತೀಚೆಗೆ ಎತ್ತು ಮಾರಿದ್ದ 60 ಸಾವಿರ ರೂ. ಮತ್ತು ಮನೆ ನಿರ್ಮಾಣಕ್ಕೆಂದು ಸಾಲ ಮಾಡಿ ತಂದಿಟ್ಟಿದ್ದ 50 ಸಾವಿರ ರೂ. ಹಾಗೂ 30 ಗ್ರಾಂ ಬಂಗಾರ ಸಂಪೂರ್ಣ ಸುಟ್ಟು ಹೋಗಿದೆ ಎಂದು ಬಸವರಾಜ್ ಪುತ್ರ ಹನುಮಂತ ತಿಳಿಸಿದರು.
ಸ್ಥಳಕ್ಕೆ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು. ವೈಯಕ್ತಿಕವಾಗಿ 25 ಸಾವಿರ ರೂ. ಪರಿಹಾರ ನೀಡಿದರು. ವಸತಿ ಯೋಜನೆಯಡಿ ನಿರಾಶ್ರಿತ ಕುಟುಂಬಕ್ಕೆ ಮನೆ ಮಂಜೂರು ಮಾಡಿಸಿಕೊಡಬೇಕು. ಸರ್ಕಾರದಿಂದ ಬರಬೇಕಾದ ಪರಿಹಾರದ ಹಣ ಕೊಡಿಸಿ ಎಂದು ತಹಸೀಲ್ದಾರ್ ಅರುಣ್ ಅವರಿಗೆ ಸೂಚನೆ ನೀಡಿದರು.
ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮುಖಂಡರಾದ ತಮಲೇಹಳ್ಳಿ ಗುರುಮೂರ್ತಿ, ಗುತ್ತಿಗೆದಾರ ಸುಧೀರ್‌ರೆಡ್ಡಿ, ಲಕ್ಷ್ಮಣ್, ಡಿ.ಆರ್. ಹನುಮಂತಪ್ಪ, ಬರ್ಕತ್ ಅಲಿ, ಮಹಮದ್ ಗೌಸ್, ಕಂದಾಯಾಧಿಕಾರಿ ಧನಂಜಯ, ಗ್ರಾಪಂ ಅಧ್ಯಕ್ಷ ಸಿದ್ದೇಶ್ ಮತ್ತಿತರರಿದ್ದರು.