ಸಿಂಧನೂರು: ತಾಲೂಕಿನ ತುರ್ವಿಹಾಳ ಪಟ್ಟಣ ಹೊರವಲಯದ ಹಿರೇಹಳ್ಳ ಬಳಿ ಮಹಿಳೆ ಶವವಾಗಿ ಪತ್ತೆಯಾದ ಪ್ರಕರಣ ತಿರುವು ಪಡೆದಿದೆ. ಪತಿಯೇ ಕೊಲೆಗೈದು ಬಿಸಾಡಿರುವುದು ತನಿಖೆಯಿಂದ ಬಯಲಾಗಿದ್ದು, ನಿಂಗಪ್ಪನನ್ನು ತುರ್ವಿಹಾಳ ಪೊಲೀಸರು ಬಂಧಿಸಿದ್ದಾರೆ.
ಗಂಗಮ್ಮ ನಿಂಗಪ್ಪ(34) ಕೊಲೆಯಾದ ಮಹಿಳೆ. ಈಚೆಗೆ ಮಹಿಳೆ ಶವವಾಗಿ ಪತ್ತೆಯಾಗಿದ್ದಳು. ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತಿ ನಿಂಗಪ್ಪ ನಿರಂತರ ಕಿರುಕುಳ ನೀಡುತ್ತಿದ್ದು, ಜು.7 ರಂದು ತೀವ್ರ ಗಾಯಗೊಳ್ಳುವಂತೆ ಹೊಡೆದು ಕೊಂದು ನಾಲೆಯ ದಂಡೆಗೆ ಎಸೆದಿದ್ದಾನೆಂದು ಮೃತಳ ಸಹೋದರ ದೂರು ನೀಡಿದ್ದರು. ತನಿಖೆಗೊಂಡ ಪೊಲೀಸರು ನಿಂಗಪ್ಪನನ್ನು ವಿಚಾರಣೆ ಮಾಡಿದ್ದು, ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಈ ಕುರಿತು ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ಸ್ಥಳಕ್ಕೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಭೇಟಿ ನೀಡಿ, ಮಾಹಿತಿ ಪಡೆದರು. ಡಿವೈಎಸ್ಪಿ ಬಿ.ಎಸ್.ತಳವಾರ, ಪಿಎಸ್‌ಐ ಸುಜಾತಾ ಇದ್ದರು.