ಎನ್.ಆರ್.ಪುರದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕಿ ಬಿ.ಜಯಂತಿ ಹಾಗೂ ಅಂಗನವಾಡಿ ಶಿಕ್ಷಕಿ ಶೈಲಾ ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು. ಪ್ರಮೀಳಕ್ಕ, ಎಚ್.ಎಸ್.ಪೂರ್ಣೇಶ್, ಭಾಗ್ಯಾ, ಜುಬೇದಾ ಇತರರಿದ್ದರು.  
ಜಿಲ್ಲೆ

ದೈವೀಗುಣದಿಂದ ಮನೆ ನಂದನವನ

ನ್.ಆರ್.ಪುರ: ಪ್ರತಿ ತಾಯಿಯೂ ಮಕ್ಕಳಲ್ಲಿ ಕೃಷ್ಣನನ್ನು ಕಾಣುತ್ತಾಳೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಬಿ.ಕೆ.ಪ್ರಮೀಳಕ್ಕ ತಿಳಿಸಿದರು.

ರಾಘವೇಂದ್ರ ಬಡಾವಣೆಯಲ್ಲಿ ತಾಲೂಕು ಕಸಾಪ ಮಹಿಳಾ ಘಟಕ ಹಾಗೂ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ, ಮಕ್ಕಳ ಕೃಷ್ಣವೇಷ ಸ್ಪರ್ಧೆ, ಉಪನ್ಯಾಸ, ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಕೃಷ್ಣನು ಮಹಾನ್ ಯೋಗಿ, ಜ್ಞಾನಿ. ಶ್ರೀಕೃಷ್ಣ ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸ ಹೆಚ್ಚಿಸುವ ಮಹಾನ್ ಶಿಕ್ಷಕನೂ ಆಗಿದ್ದಾನೆ. ಪ್ರತಿಯೊಬ್ಬರಲ್ಲೂ ದೈವೀ ಗುಣ ಇರಬೇಕು. ಆಗ ಮಾತ್ರ ನಮ್ಮ ಮನೆ ನಂದನವನವಾಗಲಿದೆ. ಕಲಿಯುಗದ ನಂತರ ಸತ್ಯಯುಗ ಬರಲಿದ್ದು ಆಗ ಸ್ವರ್ಗಾನಂದ ಎಲ್ಲರಿಗೂ ಲಭಿಸಲಿದೆ. ಪರಮಾತ್ಮನನ್ನು ಎಲ್ಲರೂ ಸ್ತುತಿಸಬೇಕು ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಕಸಾಪ ಮಹಿಳಾ ಘಟಕ ಜಿಲ್ಲೆಯಲ್ಲೇ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಹತ್ತಾರು ವಿಭಿನ್ನ ಕಾರ್ಯಕ್ರಮ ನಡೆಸುತ್ತಿದೆ. ತಾಲೂಕು ಕಸಾಪ ಕನ್ನಡವನ್ನು ಮನೆ ಮನೆಗೂ ತಲುಪಿಸುತ್ತಿದೆ. ಮುಂದಿನ ದಿನಗಳಲ್ಲಿ ಹೋಬಳಿ ಸಮ್ಮೇಳನ ನಡೆಸುತ್ತೇವೆ ಎಂದರು.
ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ ಮಾತನಾಡಿ, ದೇಶದ ಮುಂದಿನ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಹೊತ್ತಿರುವ ಶಿಕ್ಷಕ ವೃತ್ತಿ ಪವಿತ್ರವಾಗಿದೆ. ಕಸಾಪ ಮಹಿಳಾ ಘಟಕದಿಂದ ಶಿಕ್ಷಕರ ದಿನ ಆಚರಿಸುತ್ತಿದ್ದೇವೆ. ಮಕ್ಕಳಿಗೆ ಶ್ರೀಕೃಷ್ಣನ ಸ್ಪರ್ಧೆ ಏರ್ಪಡಿಸಿ ಮಕ್ಕಳಲ್ಲಿ ದೇವರನ್ನು ಕಾಣುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಕೃಷ್ಣವೇಷ ಸ್ಪರ್ಧೆಯಲ್ಲಿ 21 ಮಕ್ಕಳು ಭಾಗವಹಿಸಿದ್ದರು. ಒಂದು ವಷರ್ದ ಒಳಗಿನ ಮಕ್ಕಳ ಸ್ಪರ್ಧೆಯಲ್ಲಿ ಖುಷಿ (ಪ್ರ), ಅಭಿಜ್ಞಾ (ದ್ವಿ), 2 ರಿಂದ 5 ವರ್ಷದ ಒಳಗಿನ ಮಕ್ಕಳ ಸ್ಪರ್ಧೆಯಲ್ಲಿ ತನುಶ್ರೀ (ಪ್ರ), ಆದ್ಯಗೌಡ (ದ್ವಿ), 6 ರಿಂದ 8 ವರ್ಷದ ಒಳಗಿನ ಮಕ್ಕಳ ಸ್ಪರ್ಧೆಯಲ್ಲಿ ಆಶುತೋಷ್ (ಪ್ರ), ಫಲ್ಗುಣ (ದ್ವಿ) ಸ್ಥಾನ ಪಡೆದರು.
ನಿವೃತ್ತ ಶಿಕ್ಷಕಿ ಬಿ.ಜಯಂತಿ ಹಾಗೂ ಅಂಗನವಾಡಿ ಶಿಕ್ಷಕಿ ಶೈಲಾ ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು. ಕಸಾಪ ನಿಕಟಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್, ಹೋಬಳಿ ಘಟಕದ ಅಧ್ಯಕ್ಷೆ ಜುಬೇದಾ, ಡಾ. ಸ್ವಪ್ನಾಲಿ, ಜಯಂತಿ, ಜಯಮ್ಮ, ವಿಜಯಕುಮಾರ್, ಕೆ.ಎಸ್.ರಾಜಕುಮಾರ್ ಇದ್ದರು.