ಬಾಳೆಯಡ ಸುಬ್ರಮಣಿ ಅವರನ್ಮು ಸನ್ಮಾನಿಸಿದ ಶತಮಾನೋತ್ಸವ ಕ್ರೀಡಾ ಸಮಿತಿ ಅಧ್ಯಕ್ಷರಾದ ಮಣಿಕಂಠ. 
ಜಿಲ್ಲೆ

ಓದಿದ ಶಾಲೆಯ ಸನ್ಮಾನ ನನ್ನ ಜೀವನದ ಅತಿದೊಡ್ಡ ಗೌರವ

ಗೋಣಿಕೊಪ್ಪಲು: ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುವ ಸಂದರ್ಭದಲ್ಲಿ ಇಲ್ಲಿನ ಶಾಲಾ ಮೈದಾನದಲ್ಲಿ ಆಟವಾಡಿದ ಪರಿಣಾಮ ಒಲಿಂಪಿಯನ್‌ನಲ್ಲಿ ಭಾಗವಹಿಸುವ ಮೂಲಕ ಈ ದೇಶಕ್ಕೆ ನಮ್ಮ ನಾಡಿಗೆ ಗೌರವ ತರಲು ಸಾಧ್ಯವಾಗಿದೆ. ಇದಕ್ಕೆ ಸಾಕ್ಷಿಯಾಗಿರುವುದು ಗೋಣಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ನನ್ನ ಸಹಪಾಠಿಗಳು. ಜೀವನದಲ್ಲಿ ಎಲ್ಲೆಡೆ ಸನ್ಮಾನ, ಗೌರವ ಲಭಿಸಿದ್ದರೂ ನಾನು ಅಭ್ಯಾಸ ಮಾಡಿದ ಶಾಲೆಯಲಿ ಸಿಕ್ಕಿರುವ ಸನ್ಮಾನ ನನ್ನ ಜೀವನದ ಅತಿ ದೊಡ್ಡ ಗೌರವ ಎಂದು ಒಲಿಂಪಿಯನ್ ಬಾಳೆಯಡ ಸುಬ್ರಮಣಿ ಸಂತಸ ವ್ಯಕ್ತಪಡಿಸಿದರು.

ಗೋಣಿಕೊಪ್ಪಲುವಿನ ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಕ್ರೀಡಾ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಫೈನಲ್ ಪಂದ್ಯಾಟದ ಕ್ರೀಡೆಯನ್ನು ಉದ್ಘಾಟಿಸಿ ನಂತರ ಹಳೆಯ ವಿದ್ಯಾರ್ಥಿಗಳು ಹಾಗೂ ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು ನೀಡಿದ ಸನ್ಮಾನ, ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವರು, ಗೋಣಿಕೊಪ್ಪ ಸರ್ಕಾರಿ ಶಾಲೆಗೆ ತನ್ನದೇ ಆದ ವಿಶಿಷ್ಟ ಗೌರವವಿದೆ. ಸಾವಿರಾರು ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಿದ ಈ ಶಾಲೆಯು ಇಂದು ಶತಮಾನೋತ್ಸವ ಸಂಭ್ರಮದಲ್ಲಿರುವುದು ನಮ್ಮೆಲ್ಲರ ಹೆಗ್ಗಳಿಕೆಗೆ ಕಾರಣವಾಗಿದೆ ಎಂದರು.

ಅಂದಿನ ಉತ್ತಮ ಶಿಕ್ಷಕರ ಪಾಠ-ಪ್ರವಚನಗಳು ನಮಗೆಲ್ಲರಿಗೂ ದಾರಿ ದೀಪವಾಗಿದೆ. ಶಿಕ್ಷಣ ಸಂಸ್ಥೆ ಮತ್ತಷ್ಟು ಬೆಳೆಯಲಿ. ಸಾಕಷ್ಟು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವಂತಾಗಲಿ ಎಂದು ಆಶಿಸಿದರು.

ಸುದೀರ್ಘ 32 ವರ್ಷಗಳವರೆಗೆ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಅಪಾರ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಇತ್ತೀಚೆಗೆ ನಿವೃತ್ತಿಗೊಂಡಿರುವ ಪಿ.ಟಿ.ಮಾಸ್ಟರ್ ಎಂದೆ ಹೆಗ್ಗಳಿಕೆಗೆ ಪಾತ್ರರಾಗಿರುವ ಕಾಡ್ಯಮಾಡ ದೇವಯ್ಯ ಅವರಿಗೆ ಶಾಲೆಯ ಶತಮಾನೋತ್ಸವ ಅಂಗವಾಗಿ ಕ್ರೀಡಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕ್ರೀಡಾ ಸಮಿತಿಯ ಅಧ್ಯಕ್ಷ ಮಣಿಕಂಠ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಎಂ.ಜಿ.ಮೋಹನ್, ಉದ್ಯಮಿ ಗುಮ್ಮಟ್ಟಿರ ಕಿಲನ್ ಗಣಪತಿ, ವಕೀಲರಾದ ಸಂಜೀವ್, ಶಾಲಾ ಮುಖ್ಯಶಿಕ್ಷಕ ಕುಮಾರ್, ಗಣ್ಯರಾದ ಬಿ.ಎನ್.ಪ್ರಕಾಶ್, ಸುಬ್ರಮಣಿ, ಕೆ.ವೈ.ರಾಜೀತ್, ಚೊಟ್ಟೆಕಾಳಪಂಡ ಮನು, ಎಡಿಎಂಸಿ ಅಧ್ಯಕ್ಷೆ ಶಾಂತಿ, ಕ್ರೀಡಾ ಸಮಿತಿಯ ಪದಾಧಿಕಾರಿಗಳಾದ ಸುರೇಶ್‌ರೈ, ಪ್ರಸಾದ್, ಸುಬ್ರಮಣಿ, ಗೀತಾ, ಸುದೀಶ್, ವಿನು, ನೂರ್‌ಪಾಷ, ಬಿ.ಇ.ಕಿರಣ್, ಟಿ.ಎ.ಅಬ್ದುಲ್ ಸಲಾಂ, ರಾಜೇಂದ್ರ, ವೇದಪಂಡ ಬಿದ್ದಪ್ಪ ಸೇರಿದಂತ ಪ್ರಮುಖರು ಭಾಗವಹಿಸಿದ್ದರು.