ಸೊರಬ ಎಲ್‌ಐಸಿ ಕಚೇರಿ ಭದ್ರತಾ ಸಿಬ್ಬಂದಿ ಬಸವಣ್ಣಯ್ಯ ಸ್ವಾಮಿ ಉಳವಿ ಅವರನ್ನು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಸನ್ಮಾನಿಸಲಾಯಿತು. ಶಂಕರ್ ಶೇಟ್, ಬಂದಗಿ ಬಸವರಾಜ್ ಶೇಟ್, ನಾಗರಾಜ್ ಗುತ್ತಿ, ಸುಜಾತಾ ಜೋತಾಡಿ ಇತರರಿದ್ದರು.  
ಜಿಲ್ಲೆ

ಎಲ್‌ಐಸಿ ಕಚೇರಿಯಲ್ಲಿ ಸಿಕ್ಕ ನಗದನ್ನು ಮಹಿಳೆಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಭದ್ರತಾ ಸಿಬ್ಬಂದಿ

ಸೊರಬ: ಇತರರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವನೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ಹೇಳಿದರು.

ಎಲ್‌ಐಸಿ ಕಚೇರಿಯ ಭದ್ರತಾ ಸಿಬ್ಬಂದಿ ಬಸವಣ್ಣಯ್ಯ ಸ್ವಾಮಿ ಉಳವಿ ಅವರನ್ನು ವೇದಿಕೆ ವತಿಯಿಂದ ಗುರುವಾರ ಅಭಿನಂದಿಸಿ ಅವರು ಮಾತನಾಡಿದರು.
ಸೊರಬ ತಾಲೂಕಿನ ನೇರಲಗಿ ಗ್ರಾಮದ ಗುತ್ಯಮ್ಮ ಕಳೆದ ಕೆಲ ದಿನಗಳ ಹಿಂದೆ ಎಲ್‌ಐಸಿಗೆ ಆಫೀಸಿಗೆ ಹಣ ಕಟ್ಟಲು ಬಂದಾಗ ಹದಿನೈದು ಸಾವಿರ ರೂ. ಕಳೆದುಕೊಂಡಿದ್ದರು. ಅದು ಭದ್ರತಾ ಸಿಬ್ಬಂದಿ ಬಸವಣ್ಣಯ್ಯಗೆ ಸಿಕ್ಕಿದ್ದು, ಅದನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸ್ವಾಮಿಯವರ ಕಾರ್ಯ ಶ್ಲಾಘನೀಯ. ಉತ್ತಮ ಕೆಲಸ ಮಾಡಿದ್ದಾರೆ. ಜನ ಮೆಚ್ಚುಗೆಯ, ಮೌಲ್ಯಯುತ ಕೆಲಸ ಮಾಡಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಇದು ಇತರರಿಗೆ ಮಾದರಿಯಾಗಬೇಕು ಎಂದರು.
ಶ್ರೀ ರಂಗನಾಥ ಸೊಸೈಟಿ ಅಧ್ಯಕ್ಷ ಬಂದಗಿ ಬಸವರಾಜ್ ಶೇಟ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ನಾಗರಾಜ್ ಗುತ್ತಿ, ಕನ್ನಡ ಸಾಂಸ್ಕೃತಿಕ ಜಗಲಿಯ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ, ಎಲ್‌ಐಸಿ ಬ್ರಾಂಚ್ ಮ್ಯಾನೇಜರ್ ಗಂಗಾಧರ್, ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್, ಯುವ ಬ್ರಿಗೇಡ್‌ನ ಮಹೇಶ್ ಖಾರ್ವಿ, ಗೃಹರಕ್ಷಕ ದಳದ ತಾಲೂಕು ಘಟಕದ ಅಧಿಕಾರಿ ರೇವಣಪ್ಪ, ಪ್ರತಿನಿಧಿಗಳಾದ ಮಹೇಶ್, ಪ್ರಭಾಕರ್, ಮಂಜುನಾಥ್ ಇತರರಿದ್ದರು.