ಜಿಲ್ಲೆ

ಗೃಹ ಮಂತ್ರಿ ರಾಜೀನಾಮೆ ಕೊಡಲಿ

ಹುಬ್ಬಳ್ಳಿ: ಗೃಹ ಮಂತ್ರಿಗಳು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುತ್ತಿದ್ದಾರೆ. ಅವರಿಗೆ ನಿಭಾಯಿಸಲು ಆಗದಿದ್ದರೆ ಕೂಡಲೇ ರಾಜೀನಾಮೆ ಕೊಡಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.
ಹತ್ಯೆಯಾದ ಅಂಜಲಿ ಅಂಬಿಗೇರ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರು ಬೇಸರದಿಂದ ಸಚಿವ ಸ್ಥಾನ ಪಡೆದಿದ್ದಾರೆ. ಹೀಗಾಗಿ ಅವರಿಗೆ ಇದರಲ್ಲಿ ಆಸಕ್ತಿ ಇಲ್ಲ. ದಲಿತರೆಂಬ ಕಾರಣಕ್ಕೆ ಸರ್ಕಾರ ಅವರಿಗೆ ಈ ಖಾತೆ ನೀಡಿದೆ. ಅವರಿಗೆ ಇದರಲ್ಲಿ ಆಸಕ್ತಿ ಇಲ್ಲದಿದ್ದರೆ ಬೇರೆ ಖಾತೆ ನಿಭಾಯಿಸಲಿ ಎಂದರು.
ಹು-ಧಾ ಅವಳಿ ನಗರದಲ್ಲಿ ಗಾಂಜಾ, ಅಫೀಮು ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಯುವಕರು ದುಶ್ಚಟಗಳ ದಾಸರಾಗುತ್ತಿದ್ದು, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಾಂಜಾ ಹಾಗೂ ಡ್ರಗ್ಸ್ ಮಾರಾಟ ಬುಡ ಸಮೇತ ಮಟ್ಟ ಹಾಕಬೇಕು. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ನೇಹಾ ಹತ್ಯೆಯಂತಹ ದೊಡ್ಡ ಅನಾಹುತವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಆರೋಪಿ ವಿರುದ್ಧ ದಿಟ್ಟ ನಿರ್ಧಾರ ಕೈಗೊಂಡಿಲ್ಲ. ಗೃಹ ಮಂತ್ರಿ ವೈಫಲ್ಯದ ಮೂಲ ಕಂಡು ಹಿಡಿಯಲಿಲ್ಲ. ಆದ್ದರಿಂದ ಇನ್ನೊಂದು ಅದೇ ಮಾದರಿಯ ದುರ್ಘಟನೆ ನಡೆಯಿತು ಎಂದು ಆರೋಪಿಸಿದರು.
ರಾಜ್ಯದಲ್ಲಿ ಗ್ಯಾರಂಟಿ ಕೊಟ್ಟ ಮೇಲೆ ಸಚಿವರು, ಶಾಸಕರಿಗೆ ಉತ್ಪನ್ನ ಇಲ್ಲವಾಗಿದೆ. ಹೀಗಾಗಿ ಇವರು ವರ್ಗಾವಣೆ ಹಾಗೂ ಅಕ್ರಮ ದಂಧೆಗಳ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಮುಕ್ತ ಕರ್ತವ್ಯ ನಿರ್ಹಹಿಸಲು ಅವಕಾಶ ನೀಡಿಲ್ಲ. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವೆಂದು ಆರೋಪಿಸಿದರು.