ತಿ.ನರಸೀಪುರ: ಮೈಸೂರು ಶರಣ ಸಾಹಿತ್ಯ ಪರಿಷತ್‌ನ ತವರು ಜಿಲ್ಲೆಯಾಗಿದ್ದು, ಸುತ್ತೂರು ಶ್ರೀಗಳ ನೇರ ನಿಗಾದಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಹೇಳಿದರು.
ಮೈಸೂರು ಜಿಲ್ಲಾ ಮತ್ತು ತಿ.ನರಸೀಪುರ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ವಿವೇಕಾನಂದ ನಗರದ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ಆಯೋಜಿಸಿದ್ದ ತಿ.ನರಸೀಪುರ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸೇವಾ ದೀಕ್ಷೆ ಸ್ವೀಕಾರ ಹಾಗೂ ದತ್ತಿ ಉಪನ್ಯಾಸ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಇಡೀ ಭಾರತದಲ್ಲಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ಕೆಲಸ ಮಾಡುತ್ತಿದೆ. ತಮಿಳುನಾಡು, ದೆಹಲಿ,ದುಬೈ ಹಾಗೂ ಅಮೆರಿಕಾ ದೇಶದಲ್ಲಿ ಸಂಸ್ಥೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಸಂಸ್ಥೆಯನ್ನು ಸ್ಥಾಪಿಸಿ ಶಿವ ಶರಣರ ಹಾಗೂ ಸಾಹಿತ್ಯ ಸೇವೆಯನ್ನು ಮಾಡಲು ಅವಕಾಶ ಮಾಡಿಕೊಟ್ಟ ಸುತ್ತೂರು ಗುರು ಪರಂಪರೆಯನ್ನು ನಾವೆಲ್ಲರೂ ಗೌರವಿಸುವ ಕೆಲಸ ಮಾಡಬೇಕಿದೆ. ಮೈಸೂರು ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಕ್ರಿಯಾಶೀಲವಾಗಿ ಸಂಸ್ಥೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇರ ನಿಗಾದಲ್ಲಿ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದೆ. ಇಡೀ ತಾಲೂಕಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಪೂರ್ಣ ಅರಿವು ಸಂಸ್ಥೆಯ ಗೌರವಾಧ್ಯಕ್ಷರಾಗಿರುವ ಸುತ್ತೂರು ಶ್ರೀಗಳಿಗೆ ಇರಲಿದೆ, ಅವರ ಮಾರ್ಗದರ್ಶನ ನಮಗೆ ದೊರಕುತ್ತಿದೆ ಎಂದರು.
ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷನಾದ ನಂತರ ನಾನು, ಗೆಳೆಯ ಚಂದ್ರಶೇಖರ್ ಜತೆಗೂಡಿ ಇಡೀ ಜಿಲ್ಲೆಯ ತಾಲೂಕುಗಳ ಗ್ರಾಮ-ಗ್ರಾಮಗಳಲ್ಲೂ ಬಸವ ತತ್ವ ಪ್ರಚಾರಕ್ಕಾಗಿ ಶ್ರಮಿಸುತ್ತಿದ್ದೇನೆ. ತಿ.ನರಸೀಪುರ ತಾಲೂಕು ನನಗೆ ತವರು ತಾಲೂಕಾದ್ದರಿಂದ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗುವ ಜತೆಗೆ ಶರಣ ಸಾಹಿತ್ಯ ಪರಿಷತ್‌ನಲ್ಲಿ ದತ್ತಿ ಇಟ್ಟು ಉಪನ್ಯಾಸ ಮಾಡಲು ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಮಾಡ್ರಹಳ್ಳಿ ಮಠದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ನಾವೀಗ ಬದುಕನ್ನು ಸಾರ್ಥಕ ಮಾಡಿಕೊಳ್ಳುವ ಕಾಲಘಟ್ಟದಲ್ಲಿದ್ದೇವೆ. ಮನೆ ಕಟ್ಟುವುದು, ಅಧಿಕಾರ ಹಾಗೂ ಹಣ ಸಂಪಾದನೆ ಮಾಡುವುದೇ ನಮ್ಮ ಮುಖ್ಯ ಗುರಿಯಾಗಬಾರದು, ಬದುಕಿಗೆ ವಿವೇಕ, ಸಂಸ್ಕಾರ ನೀಡಬೇಕು, ಸಂಸ್ಕಾರ ಇಲ್ಲದಿದ್ದರೆ ಮನುಷ್ಯ ಪಶುವಿಗೆ ಸಮಾನವಾಗಿದ್ದು, ರಾಜೇಂದ್ರ ಶ್ರೀಗಳು ಶರಣ ಸಾಹಿತ್ಯ ಪರಿಷತ್ ಮಾಡಿ ನಮಗೆಲ್ಲ ಸಂಸ್ಕಾರ ಕೊಡುತ್ತಿದ್ದು ಅವರ ಆದರ್ಶ ಪಾಲನೆಗೆ ಎಲ್ಲರೂ ಮುಂದಾಗಬೇಕು ಎಂದರು.
ತಿ.ನರಸೀಪುರ ತಾಲೂಕು ಶರಣ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆಬ್ಬೇಹುಂಡಿ ಸೋಮಶೇಖರಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳಿಗೆ ವಾಟಾಳು ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಸೇವಾ ದೀಕ್ಷೆ ಪ್ರದಾನ ಮಾಡಿದರು.
ಗರ್ಗೇಶ್ವರಿ ಹಿಲಾಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕನ್ನಡ ಅಧ್ಯಾಪಕ ಮು.ನಾ.ರಮೇಶ್ ಅವರು ಬಸವಣ್ಣನವರ ಸಾಮಾಜಿಕ ಚಿಂತನೆಗಳು ವಿಷಯಕ್ಕೆ ಸಂಬಂಧಿಸಿದಂತೆ ದತ್ತಿ ಉಪನ್ಯಾಸ ನೀಡಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ತೊಂಟೇಶ್, ಜಿಲ್ಲಾ ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸಿ. ಎಂ. ಪ್ರಕಾಶ್,ಬಿಜೆಪಿ ಕ್ಷೇತ್ರಾಧ್ಯಕ್ಷ ಸತ್ಯಪ್ಪ, ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಯುವ ಘಟಕದ ಅಧ್ಯಕ್ಷ ಕೆ.ಎನ್.ಅಶೋಕ್, ಪುರಸಭೆ ಸದಸ್ಯೆ ರೂಪಶ್ರೀ ಪರಮೇಶ್, ವಕೀಲ ಜ್ಞಾನೇಂದ್ರ ಮೂರ್ತಿ, ಮುಖಂಡರಾದ ಆಡಿಟರ್ ಮಂಜುನಾಥ್, ಕಾರ್ ಮಲ್ಲಪ್ಪ, ಬಿ.ಪಿ.ಪರಶಿವಮೂರ್ತಿ, ಸುಗಂಧರಾಜು, ಬಿಳಿಗೆರೆಹುಂಡಿ ಮಹದೇವಸ್ವಾಮಿ, ಬಜ್ಜಿ ನಿಂಗಪ್ಪ, ತೊಟ್ಟವಾಡಿ ರವಿ,ಡಣಾಯಕನಪುರ ಮಲ್ಲಣ್ಣ, ಯಡದೊರೆ ಭಗವಾನ್, ಹಿರಿಯೂರು ಪ್ರಕಾಶ್, ಮೂಗೂರು ಕುಮಾರಸ್ವಾಮಿ, ಸಾಲೂರು ಸ್ವಾಮಿ ಇತರರು ಇದ್ದರು.