ಜಿಲ್ಲೆ

ಜನರ ಬದುಕನ್ನು ಹೈರಾಣಾಗಿಸಿದೆ ಹೆದ್ದಾರಿ

ವೀರೇಶ ಸೌದ್ರಿ

ಭಟ್ಕಳ: ತಾಲೂಕಿನ ಬೆಂಗ್ರೆಯಲ್ಲಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ಜನಸ್ಪಂದನ ಸಭೆ ಜರುಗಿತು.

ಬೆಂಗ್ರೆ ಗ್ರಾಪಂ ಸದಸ್ಯ ವಿಷ್ಣು ದೇವಡಿಗ ಮಾತನಾಡಿ, ಜನರ ಬದುಕನ್ನು ರಾಷ್ಟ್ರೀಯ ಹೆದ್ದಾರಿ ಹೈರಾಣಾಗಿಸಿದೆ. ರಸ್ತೆ ಪಕ್ಕದಲ್ಲಿ ಚರಂಡಿ ಇಲ್ಲದೆ ನೀರು ಕೃಷಿ ಭೂಮಿಗೆ ನುಗ್ಗಿ ಫಸಲು ನಾಶವಾಗಿದೆ. ಹೆದ್ದಾರಿ ಇಲಾಖೆ ಈ ಕುರಿತು ಸ್ಪಂದಿಸುತ್ತಿಲ್ಲ. ಅತಿಯಾದ ಮಳೆ ಸುರಿದರೆ ಹೆದ್ದಾರಿಯಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದಕ್ಕೊಂದು ಅಂತ್ಯ ಹಾಡದಿದ್ದರೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ. ಬೆಂಗ್ರೆಯ ಸಣ್ಣಹೊಳೆ, ದೊಡ್ಡಹೊಳೆಯಲ್ಲೂ ಹೂಳು ತುಂಬಿಕೊಂಡಿದೆ. ಇದರಿಂದ ಉಪ್ಪು ನೀರು ಸರಾಗವಾಗಿ ಹರಿದು ಬಂದು ಕೃಷಿ ಭೂಮಿ ಹಾಳಾಗುತ್ತಿದೆ. ಹೂಳು ತೆಗೆಯುವ ಹಾಗೂ ನದಿಗೆ ದಂಡು ಕಟ್ಟುವ ಕಾರ್ಯವಾಗಬೇಕು ಎಂದು ಸಚಿವರ ಬಳಿ ಗ್ರಾಮಸ್ಥರ ಪರವಾಗಿ ಅಹವಾಲು ಸಲ್ಲಿಸಿದರು.

ಗ್ರಾಮದ ಹಿರಿಯ ವೆಂಕ್ಟಯ್ಯ ಭೈರುಮನೆ ಹೆದ್ದಾರಿಯ ಸಮಸ್ಯೆ ಕುರಿತು ಪ್ರಸ್ತಾಪಿಸಿದರು. ಬಳಿಕ ಗ್ರಾಮಸ್ಥರು ಸಮಸ್ಯೆಗಳ ಬಗ್ಗೆ ಸಚಿವರಿಗೆ ಅಹವಾಲುಗಳನ್ನು ಸಲ್ಲಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಹಾರ ಕೈಗೊಳ್ಳುವಂತೆ ಸೂಚಿಸಲಾಯಿತು.

ಸಭೆಯಲ್ಲಿ ಬೆಂಗ್ರೆ ಗ್ರಾಪಂ ಅಧ್ಯಕ್ಷೆ ಪ್ರಮೀಳಾ ಡಿಕೋಸ್ತಾ, ಉಪಾಧ್ಯಕ್ಷ ಗೋವಿಂದ ನಾಯ್ಕ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾರ್ಯದರ್ಶಿ ಸುರೇಶ ನಾಯ್ಕ, ಭಾಸ್ಕರ ನಾಯ್ಕ ಇತರರು ಉಪಸ್ಥಿತರಿದ್ದರು.