ಹರಿಪ್ರಸಾದ್ ನಂದಳಿಕೆ ಕಾರ್ಕಳ ಮಳೆ ನೀರು ಹರಿದು ಹೋಗಲು ಹೆದ್ದಾರಿ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ರಸ್ತೆ ತುಂಬೆಲ್ಲ ಕೆಸರು ನೀರು ಹರಿಯುತ್ತಿದ್ದು ರಸ್ತೆಯೇ ಚರಂಡಿಯಾಗಿ ವಾರ್ಪಟ್ಟಿರುವ ಪರಿಸ್ಥಿತಿ ಮುಂಡ್ಕೂರು ಗ್ರಾಮದಲ್ಲಿದೆ. ಬೆಳ್ಮಣ್‌ನಿಂದ ಕಟೀಲು ಬಜ್ಪೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಮುಂಡ್ಕೂರ್ ಎಂಬ ಪೇಟೆಯ ರಸ್ತೆಗಳು ಚರಂಡಿಯಾಗಿದೆ. ಇದರಿಂದ ವಾಹನ ಸವಾರ ಸಂಚಾರಕ್ಕೆ ತೊಂದರೆಯಾಗಿದೆ. ಅಲ್ಲದೇ ವಾಹನಗಳು ಓಡಾಡುವ ವೇಳೆ ಕೆಸರು ನೀರು ಪಾದಾಚಾರಿಗಳ ಮೇಲೆ ಬೀಳುತ್ತಿದೆ. ಇಲ್ಲಿನ ರಸ್ತೆಗಳ ಬದಿ ಸರಿಯಾದ ಚರಂಡಿ ವ್ಯವಸ್ಥೆ ಹಾಗೂ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಸ್ಥಳೀಯರು ಹಾಗೂ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರತಿ ಮಳೆಗಾಲದಲ್ಲೂ ಈ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ರಸ್ತೆಯು ಮಳೆ ನೀರಿನಿಂದ ಜಲಾವೃತಗೊಂಡು ತೋಡುಗಳಾಗಿ ಪರಿವರ್ತನೆಯಾಗುತ್ತಿದೆ. ಸಮಸ್ಯೆ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಶಾಶ್ವತ ಪರಿಹಾರ ಕಂಡಿಲ್ಲ. ಇಲ್ಲಿನ ರಸ್ತೆ ಸಮಸ್ಯೆಯಿಂದ ವಾಹನ ಸವಾರರಿಂದ ಹಿಡಿದು ಗ್ರಾಮಸ್ಥರು ಪಾದಚಾರಿಗಳು ಸಮಸ್ಯೆ ಎದುರಿಸುವಂತಾಗಿದೆ. ಲೋಕೋಪಯೋಗಿ ಇಲಾಖೆ ವಾಡಲಿ ಎಂದು ಸ್ಥಳೀಯ ಪಂಚಾಯಿತಿ ಕಾದು ಕುಳಿತ್ತಿದ್ದು ರಸ್ತೆಯ ನೀರು ಹರಿದು ಹೋಗಲು ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಸ್ಥಳೀಯಾಡಳಿತ ಸಂಪೂರ್ಣ ವಿಫಲವಾಗಿದೆ.
ಬೆಳ್ಮಣ್ ಸೇರಿದಂತೆ ಈ ಭಾಗದ ಜನರಿಗೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಮಂಗಳೂರು ವಿವಾನ ನಿಲ್ದಾಣಕ್ಕೆ ತೆರಳಲು ಇದು ಹತ್ತಿರದ ಮಾರ್ಗವಾಗಿದೆ. ಅಲ್ಲದೆ ಮೂಡುಬಿದಿರೆ ಸಂಪರ್ಕಿಸಲು ಈ ರಸ್ತೆ ಹತ್ತಿರವಾಗಿದೆ. ಹೀಗಾಗಿ ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನ ಸವಾರರು ಸಂಚರಿಸುತ್ತಾರೆ.
ರಸ್ತೆಯಲ್ಲಿ ಮಳೆ ನೀರು ಹರಿದು ಸಮಸ್ಯೆಗಳಾಗುತ್ತಿದೆ. ಈಗಾಗಲೇ ರಸ್ತೆಯ ಹೊಂಡದಲ್ಲಿ ಬಿದ್ದು ಅನೇಕ ಸವಾರರು ಗಾಯಗೊಂಡಿದ್ದಾರೆ. - ಸುರೇಶ್, ಗ್ರಾಮಸ್ಥರು ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆಗಳಿಲ್ಲದೆ ಮಳೆಯ ನೀರು ಚರಂಡಿ ನೀರು ಎಲ್ಲವೂ ರಸ್ತೆಯಲ್ಲಿ ಹರಿಯುವಂತಾಗಿದೆ. ಇದರಿಂದ ನಿತ್ಯ ಸಮಸ್ಯೆಗಳು ಆಗುತ್ತಿದ್ದರೂ ಅಧಿಕಾರಿಗಳು ಹಾಗೂ ಸ್ಥಳಿಯಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. -ಮಹೇಶ್, ವಾಹನ ಸವಾರ