ಜಿಲ್ಲೆ

‘ಪಾರಂಪರಿಕ ನಡಿಗೆ’ ಇದೀಗ ಪ್ರತಿ ತಿಂಗಳ ಮೊದಲ ಶನಿವಾರ

ಅವಿನಾಶ್ ಜೈನಹಳ್ಳಿ ಮೈಸೂರು
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂದರ್ಭಕ್ಕೆ ಸೀಮಿತವಾಗಿದ್ದ ‘ಪಾರಂಪರಿಕ ನಡಿಗೆ’ಯನ್ನು ಪ್ರತಿ ತಿಂಗಳು ಆಯೋಜಿಸಲು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮುಂದಾಗಿದೆ.


ದಸರಾ ಮಹೋತ್ಸವದ ಮೆರುಗು ಹೆಚ್ಚಿಸುತ್ತಿದ್ದ ‘ಪಾರಂಪರಿಕ ನಡಿಗೆ’ ಇದೀಗ ಪ್ರತಿ ತಿಂಗಳ ಮೊದಲ ಶನಿವಾರ ನಡೆಯಲಿದ್ದು, ‘ಪಾರಂಪರಿಕ ನಡಿಗೆ’ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಲ್ಲಿ ಪಾರಂಪರಿಕ ಕಟ್ಟಡಗಳ ಅರಿವು, ಮಹತ್ವವನ್ನು ವರ್ಷಪೂರ್ತಿ ಸಾರಲಿದೆ. ಅಲ್ಲದೆ, ಮುಖ್ಯವಾಗಿ ಮೈಸೂರಿನ ನೂರಾರು ವರ್ಷಗಳ ಹಳೆಯ ಕಟ್ಟಡಗಳು, ಅರಮನೆಗಳು, ಪಾರಂಪರಿಕ ಸ್ಮಾರಕಗಳ ಬಗ್ಗೆ ವಿದೇಶಿಗರಿಗೆ ತಿಳಿಯಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾರಂಪರಿಕ ನಗರಿ ಮೈಸೂರಿನ ಕೀರ್ತಿ ಇನ್ನಷ್ಟು ಹೆಚ್ಚಾಗಲಿದೆ.


ಮಹಾಮಾರಿ ಕೋವಿಡ್‌ನಿಂದಾಗಿ 2019 ರಿಂದ 2022 ರವರೆಗೆ ಕಳೆಗುಂದಿದ್ದ ಮೈಸೂರು ಪ್ರವಾಸೋದ್ಯಮಕ್ಕೆ ಮತ್ತೆ ಜೀವಕಳೆ ಬಂದಿದೆ. ಈ ಮಧ್ಯೆ ಪ್ರತಿ ತಿಂಗಳು ‘ಪಾರಂಪರಿಕ ನಡಿಗೆ’ ಕಾರ್ಯಕ್ರಮ ಆಯೋಜಿಸುತ್ತಿರುವುದು ಮೈಸೂರಿನ ಪ್ರವಾಸೋದ್ಯಮಕ್ಕೆ ಪೂರಕವಾಗಿದೆ. ಜತೆಗೆ, ಪಾರಂಪರಿಕ ನಗರಿ ಹೆಸರಿಗೆ ಮತ್ತಷ್ಟು ಮೆರುಗು ನೀಡಲಿದೆ.


ಮೈಸೂರಿನ ಇತಿಹಾಸ ತಜ್ಞರು, ನಿವೃತ್ತ ಪ್ರಾಧ್ಯಾಪಕರ ಸಭೆಯಲ್ಲಿ ಪುರಾತತ್ವ ಇಲಾಖೆಯ ಅಧಿಕಾರಿಗಳು ಪಾರಂಪರಿಕ ನಡಿಗೆಯ ರೂಪುರೇಷೆಗಳನ್ನು ಈಗಾಗಲೇ ಸಿದ್ಧಪಡಿಸಿದ್ದಾರೆ. ಯಾವ ಯಾವ ಕಟ್ಟಡಗಳಿಗೆ ಭೇಟಿ ನೀಡಬೇಕು, ಯಾವ ಮಾರ್ಗದಲ್ಲಿ ನಡೆ ಸಾಗಬೇಕು ಎಂಬುದು ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಿ ಕಾರ್ಯಕ್ರಮಕ್ಕೆ ಅಂತಿಮ ರೂಪ ನೀಡಿದ್ದಾರೆ.

ಐದು ಮಾರ್ಗದಲ್ಲಿ ರೂಟ್ ಮ್ಯಾಪ್


ಪ್ರತಿ ತಿಂಗಳ ಮೊದಲ ಶನಿವಾರ ಬೆಳಗ್ಗೆ 6.30ಕ್ಕೆ ಪುರಭವನದಿಂದ ಪಾರಂಪರಿಕೆ ನಡಿಗೆ ಆರಂಭವಾಗಲಿದೆ. ಆಸಕ್ತರು ನೇರವಾಗಿ ಪುರಭವನದ ಬಳಿ ಬರಬಹುದು. ಪಾರಂಪರಿಕ ಕಟ್ಟಡಗಳನ್ನು ಕೂಡಿಸುವ ಐದು ಮಾರ್ಗದ ರೂಟ್ ಮ್ಯಾಪ್ ಸಿದ್ಧಪಡಿಸಲಾಗಿದೆ. ಪ್ರತಿ ತಿಂಗಳು ಒಂದೊಂದು ಮಾರ್ಗದಲ್ಲಿ ಪಾರಂಪರಿಕ ನಡಿಗೆ ನಡೆಯಲಿದೆ. ಆ ಮೂಲಕ ನಗರದ ಎಲ್ಲ ಪಾರಂಪರಿಕ ಕಟ್ಟಡಗಳಿಗೆ ಭೇಟಿ ನೀಡಿ, ಸದರಿ ಕಟ್ಟಡಗಳ ಮಾಹಿತಿಯನ್ನು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ತಿಳಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಭಾಗಿಯಾಗುವ ಎಲ್ಲರಿಗೂ ಮೈಸೂರಿನ ಇತಿಹಾಸ ತಜ್ಞರು ಪ್ರತಿಯೊಂದು ಪಾರಂಪರಿಕ ಕಟ್ಟಡದ ಹಿನ್ನೆಲೆ, ಪ್ರಾಮುಖ್ಯತೆ ಹಾಗೂ ವಾಸ್ತುಶಿಲ್ಪ ಶೈಲಿಯ ಮಹತ್ವ ತಿಳಿಸಿಕೊಡಲಿದ್ದಾರೆ.
ಪಾರಂಪರಿಕ ನಡಿಗೆ ಸಂಬಂಧ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ನಗರದ ಎಲ್ಲ ಹೋಟೆಲ್, ಶಾಲಾ-ಕಾಲೇಜು, ಕಚೇರಿಗಳಿಗೆ ಮಾಹಿತಿ ನೀಡಲಾಗಿದೆ. ಆ ಮೂಲಕ ಮೈಸೂರಿಗೆ ಬರುವ ಪ್ರವಾಸಿಗರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ನಡಿಗೆಯಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಲಾಗಿದೆ.

ಕಟ್ಟಡಗಳ ಭೇಟಿ, ಮಾಹಿತಿ


ಪುರಭವನ, ಸಯ್ಯಜಿರಾವ್ ರಸ್ತೆ, ಆಯುರ್ವೇದ ಕಾಲೇಜು ವೃತ್ತ, ದೊಡ್ಡಗಡಿಯಾರ, ಕೆ.ಆರ್.ಮಾರುಕಟ್ಟೆ, ಕೆ.ಆರ್.ಆಸ್ಪತ್ರೆ, ಮಹಾರಾಜ ಕಾಲೇಜು, ಜಿಲ್ಲಾಧಿಕಾರಿ ಕಚೇರಿ ಹಳೇ ಕಟ್ಟಡ, ರೈಲ್ವೆ ನಿಲ್ದಾಣ, ಕ್ರಾಫರ್ಡ್ ಹಾಲ್, ಪರಕಾಲಮಠ, ಪದ್ಮಾಲಯ, ಮುಡಾ ವೃತ್ತ, ಕಾವಾ ಕಾಲೇಜಿನ ಹಳೇ ಕಟ್ಟಡ, ಫ್ರಿಮೇಷನ್ ಕ್ಲಬ್, ಚಾಮರಾಜೇಂದ್ರ ಒಡೆಯರ್ ವೃತ್ತ, ಅಂಬಾವಿಲಾಸ ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕಗಡಿಯಾರ, ದೇವರಾಜ ಮಾರುಕಟ್ಟೆ, ಮೈಸೂರು ಮೆಡಿಕಲ್ ಕಾಲೇಜು, ಸರ್ಕಾರಿ ಆಯುರ್ವೇದ ಕಾಲೇಜು ಸೇರಿದಂತೆ ವಿವಿಧ ಕಟ್ಟಡಗಳಿಗೆ ಭೇಟಿ ನೀಡುವ ಮೂಲಕ ಅವುಗಳ ಸಂಕ್ಷಿಪ್ತ ಇತಿಹಾಸ ಮೆಲುಕು ಹಾಕಬಹುದಾಗಿದೆ. ಸದರಿ ಕಟ್ಟಡಗಳನ್ನು ಸಂದಿಸುವಂತಹ ಐದು ಮಾರ್ಗ ಸಿದ್ಧವಾಗಿವೆ.

ಮಹತ್ವ ಉಳಿಸುವ ಯತ್ನ


ನಗರದಲ್ಲಿ 600ಕ್ಕೂ ಹೆಚ್ಚು ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳೆಂದು ಗುರುತಿಸಲಾಗಿತ್ತು. ಈ ಪೈಕಿ ಕೆಲ ಕಟ್ಟಡಗಳು ಈಗಾಗಲೇ ಹಾಳಾಗಿವೆ. ನೂರು ವರ್ಷ ತುಂಬಿರುವ 100 ಕಟ್ಟಡ ಮೈಸೂರಿನಲ್ಲಿ ಇವೆ. ಹತ್ತಾರು ಅರಮನೆಗಳಿವೆ. ನೂರು ವರ್ಷ ತುಂಬಿರುವ ಅನೇಕ ಮನೆಗಳೂ ಇವೆ. ಉಳಿದ ಕಟ್ಟಡಗಳ ರಕ್ಷಣೆಗೆ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪುರಾತತ್ವ ಇಲಾಖೆ, ನಗರಪಾಲಿಕೆ, ಸರ್ಕಾರ ಹಾಗೂ ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮ ವಹಿಸುತ್ತಿವೆ. ಸಾರ್ವಜನಿಕರೂ ಪಾರಂಪರಿಕ ಕಟ್ಟಡಗಳ ಐತಿಹ್ಯದ ಅರಿತು, ಅವುಗಳನ್ನು ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪಾರಂಪರಿಕ ಕಟ್ಟಡಗಳ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡಬೇಕಾಗಿದೆ. ಈ ಮೂಲಕ ಪಾರಂಪರಿಕ ನಗರಿ ಮೈಸೂರಿನ ಹೆಸರನ್ನು ಮುಂದಿನ ತಲೆಮಾರಿನವರೆಗೂ ಉಳಿಸಬೇಕಾಗಿದೆ.

ಎರಡನೇ ಬಾರಿಗೆ ಆರಂಭ


ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕಚೇರಿಯನ್ನು ಹಂಪಿಯಿಂದ ಮೈಸೂರಿಗೆ ಸ್ಥಳಾಂತರಿಸಿದ ವೇಳೆ ಅಂದಿನ ಆಯುಕ್ತ ತ.ಮ.ವಿಜಯಭಾಸ್ಕರ್ ಮೊದಲ ಬಾರಿಗೆ ವಾರಾಂತ್ಯದಲ್ಲಿ ಪಾರಂಪರಿಕ ನಡಿಗೆ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆರಂಭಿಸಿದರು. ಶನಿವಾರ ಹಾಗೂ ಭಾನುವಾರ ಕಡ್ಡಾಯವಾಗಿ ಪಾರಂಪರಿಕ ನಡಿಗೆ ನಡೆಸಲಾಗುತ್ತಿತ್ತು. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಅವರನ್ನು ಕರೆದುಕೊಂಡು ಹೋಗುವ ಚಟುವಟಿಕೆಗಳನ್ನೂ ರೂಪಿಸಲಾಯಿತು. ಕಾಲೇಜುಗಳಲ್ಲಿ ಪಾರಂಪರಿಕ ಕ್ಲಬ್‌ಗಳನ್ನು ಆರಂಭಿಸಿ ಚಟುವಟಿಕೆ ವಿಸ್ತರಿಸಲಾಯಿತು. ಬಳಿಕ ಕಾರ್ಯಕ್ರಮ ದಸರಾ ಹಾಗೂ ವಿಶೇಷ ದಿನಗಳಿಗೆ ಸೀಮಿತವಾಯಿತು. ಇದೀಗ ಮತ್ತೆ ಪ್ರತಿ ತಿಂಗಳು ಪಾರಂಪರಿಕ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಲ್ಲಿ ಪಾರಂಪರಿಕ ಕಟ್ಟಡಗಳ ಅರಿವು, ಮಹತ್ವವನ್ನು ಸಾರುವ ಉದ್ದೇಶದಿಂದ ‘ಪಾರಂಪರಿಕ ನಡಿಗೆ’ಯನ್ನು ಪ್ರತಿ ತಿಂಗಳ ಮೊದಲ ಶನಿವಾರ ಆಯೋಜಿಸಲಾಗುತ್ತದೆ. ಈ ಸಂಬಂಧ ಐದು ಮಾರ್ಗಗಳನ್ನು ಸಿದ್ಧ ಪಡಿಸಲಾಗಿದ್ದು, ಪ್ರತಿ ತಿಂಗಳು ಒಂದೊಂದು ಮಾರ್ಗದಲ್ಲಿ ನಡಿಗೆ ನಡೆಯಲಿದೆ. ಎಲ್ಲರೂ ಮುಕ್ತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.ಎ.ದೇವರಾಜು ಆಯುಕ್ತರು, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ