ಮೈಸೂರು: ಅಲ್ಲಿ ಅಕ್ಷರಶಃ ನಾಡಿನ ಗಂಡುಕಲೆ ‘ಕುಸ್ತಿ’ ಪರಂಪರೆ ವಿಜೃಂಭಿಸಿತ್ತು. ನಿರೀಕ್ಷೆಗೂ ಮೀರಿ ಸೇರಿದ್ದ ಪ್ರೇಕ್ಷಕರು ಹುರಿಯಾಳುಗಳನ್ನು ಹುರಿದುಂಬಿಸುತ್ತಿದ್ದರು. ಜತೆಗೆ ಮಟ್ಟಿ ಮೇಲೆ ಜಟ್ಟಿತನ ಮೆರೆದ ಪೈಲ್ವಾನರಿಗೆ ಶಿಳ್ಳೆ, ಚಪ್ಪಾಳೆಯ ಪ್ರೋತ್ಸಾಹವನ್ನು ನೀಡಿದರು…!
ಇದು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜಯಂತಿ ಅಂಗವಾಗಿ ಜಯಚಾಮರಾಜ ಒಡೆಯರ್ ಗರಡಿ ಸಂಘದಿಂದ ಭಾನುವಾರ ನಗರದ ದೊಡ್ಡಕೆರೆ ಮೈದಾನದಲಿರುವ ಜಯಚಾಮರಾಜ ಒಡೆಯರ್ ಕುಸ್ತಿ ಅಖಾಡದಲ್ಲಿ ಏರ್ಪಡಿಸಿದ್ದ ನಾಡ ಕುಸ್ತಿ ಪಂದ್ಯಾವಳಿಯಲ್ಲಿ ಕಂಡು ಬಂದ ದೃಶ್ಯ.
ಗಣ್ಯರು ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡುತ್ತಿದ್ದಂತೆ ಕ್ರೀಡಾಂಗಣದ ಮೂಲೆ - ಮೂಲೆಯಲ್ಲೂ ನೆಚ್ಚಿನ ಪೈಲ್ವಾನರಿಗೆ ಜೈಕಾರಗಳು ಮೊಳಗಿತು. ಬಗೆ, ಬಗೆಯ ಹೂಗಳಿಂದ ಅಲಂಕಾರಗೊಂಡ ಮಟ್ಟಿಯ ಮೇಲೆ ಹುಬ್ಬೇರಿದ ಪೈಲ್ವಾನರು ವಿವಿಧ ಪಟ್ಟು ಪ್ರದರ್ಶಿಸಿ ಮದಗಜಗಳ ರೀತಿ ಸೆಣೆಸುತ್ತಿದ್ದಂತೆ ಕಿಕ್ಕಿರಿದು ಸೇರಿದ್ದ ಕುಸ್ತಿ ಪ್ರೇಮಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಇನ್ನು ನೆಚ್ಚಿನ ಜಟ್ಟಿಗಳು ಪರಾಕ್ರಮ ಮೆರೆದು ಎದುರಾಳಿಯನ್ನು ಚಿತ್‌ಮಾಡಿದಾಗ ಶಿಳ್ಳೆ, ಚಪ್ಪಾಳೆಗಳಿಂದ ಅಭಿನಂದನೆ ಸಲ್ಲಿಸುತ್ತಿದ್ದರು. ಮಹಿಳೆಯರ ಆರು ಜೋಡಿ ಕುಸ್ತಿ ವಿಶೇಷವಾಗಿ ಆರ್ಕಷಿಸಿತು.