ಜಿಲ್ಲೆ

ಸಿಎಂ ತವರಲ್ಲೇ ಕೈ ಶಾಸಕನ ಅಸಹಾಯಕತೆ!


ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ, ನಗರಪಾಲಿಕೆ ಅಧಿಕಾರಿಗಳ ಕಾರ್ಯವೈಖರಿಗೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿನ ಅಧಿಕಾರಿಗಳು ಸಮರ್ಥವಾಗಿ ಕೆಲಸ ಮಾಡದೆ ಇರುವ ಕಾರಣ ಪ್ರಗತಿ ಕುಂಠಿತವಾಗುತ್ತಿದೆ ಎಂದು ಆರೋಪಿಸಿದರು.

ಸರ್ಕಾರಿ ಜಾಗ ಕಬಳಿಕೆಯಾಗುತ್ತಿದ್ದರೂ ಅದನ್ನು ರಕ್ಷಿಸಲು ನಮ್ಮಿಂದ ಆಗುತ್ತಿಲ್ಲ. ಇನ್ನು ನಾವು ಸಾರ್ವಜನಿಕರ ಸಮಸ್ಯೆ ಹೇಗೆ ಬಗೆಹರಿಸಲು ಸಾಧ್ಯ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ನಾನು ವೇದಿಕೆಯಲ್ಲಲ್ಲ, ಸಾರ್ವಜನಿಕರ ಜತೆ ಕುಳಿತು ಸಮಸ್ಯೆ ಹೇಳಿಕೊಳ್ಳಬೇಕಾದ ಸಮಯ ಬಂದಿದೆ. ಲೋಕಸಭೆ ಚುನಾವಣೆ ನೀತಿಸಂಹಿತೆ ಕಾರಣದಿಂದ ಸರ್ಕಾರಿ ಕೆಲಸಗಳು ನಿಂತಿದ್ದವು. ವಿಧವೆಯರು, ವೃದ್ಧರು, ಅಂಗವಿಕಲರಿಗೆ ಆರೇಳು ತಿಂಗಳಿಂದಲೂ ವೇತನ ಬಂದಿಲ್ಲ. ಇದರಿಂದ ಜನರು ಪರದಾಡುತ್ತಿದ್ದಾರೆ. ಬಿಪಿಎಲ್ ಪಡಿತರ ಚೀಟಿ ಅರ್ಜಿಗಳು ವಿಲೇವಾರಿ ಆಗಿಲ್ಲ. ವೈದ್ಯಕೀಯ ಸೌಲಭ್ಯಕ್ಕಾಗಿ ಹಲವರು ಈ ಕಾರ್ಡ್ ಬಯಸುತ್ತಿದ್ದಾರೆ. ಎಲ್ಲ ಸೌಲಭ್ಯಕ್ಕೂ ಈ ಚೀಟಿ ಪರಿಗಣಿಸಬಾರದು. ಪಡಿತರಕ್ಕೆ ಮಾತ್ರವೇ ಸೀಮಿತಗೊಳಿಸಬೇಕು. ಮಳೆಯಿಂದಾದ ಹಾನಿಗೆ ಪರಿಹಾರ ನೀಡುವ ಕೆಲಸವನ್ನು ಜಿಲ್ಲಾಡಳಿತ ಅಥವಾ ಸ್ಥಳೀಯ ಸಂಸ್ಥೆಗಳಿಂದ ಆಗಿಲ್ಲ. ನಗರದಲ್ಲಿ ಒಳಚರಂಡಿ ಸಮಸ್ಯೆ ಬಹಳ ದೊಡ್ಡದಾಗಿ ಪರಿಣಮಿಸಿದೆ. ಇದನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಕೆಸರೆ ಎಸ್‌ಟಿಪಿ ಬಳಿ ಪಾಲಿಕೆಗೆ ಸೇರಿದ ಜಾಗದಲ್ಲಿ ಖಾಸಗಿಯವರು ವಾಣಿಜ್ಯ ಕಟ್ಟಡ ನಿರ್ಮಿಸಿದ್ದಾರೆ. ಸ್ವತಃ ನಾನೇ ದೂರು ಸಲ್ಲಿಸಿದರೂ ಪಾಲಿಕೆಯಿಂದ ಕ್ರಮ ವಹಿಸಿಲ್ಲ. ನಗರದ ಸುತ್ತಲಿನ ಸ್ಥಳೀಯ ಸಂಸ್ಥೆಗಳನ್ನು ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಮಾಡಲಾಗಿದೆ. ಆದರೆ, ದಾಖಲಾತಿಗಳನ್ನು ಹಸ್ತಾಂತರಿಸಿಲ್ಲ. ಇದರಿಂದ ಬಹಳ ತೊಂದರೆ ಆಗುತ್ತಿದೆ. ಈ ಸಮಸ್ಯೆ ಪರಿಹರಿಸಬೇಕು. ಅನಧಿಕೃತ ಬಡಾವಣೆಗಳು ತಲೆ ಎತ್ತದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.