ಹುಬ್ಬಳ್ಳಿ : ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಿಸಿರುವುದು ಕಾಂಗ್ರೆಸ್ನ ಓಲೈಕೆ ರಾಜಕಾರಣದ ಪರಮಾವಧಿ ಎಂದು ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶೆಟ್ಟರ್, ಮುಸ್ಲಿಂ ಸಮಾಜದವರು ಮಾತ್ರ ಬೆಂಬಲ ನೀಡುತ್ತಾರೆ ಎನ್ನುವ ಮನಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಬೇರೆ ಧರ್ಮದವರು ತಮ್ಮ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂಬ ಆತಂಕದಿಂದ ಕಾಂಗ್ರೆಸ್ನವರು ಅತಿಯಾದ ಓಲೈಕೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ನ ಈ ಓಲೈಕೆ ಚುನಾವಣೆ ಉದ್ದೇಶಕ್ಕೆ ಮಾತ್ರ ಸೀಮಿತವಾಗಿದೆ. ಇದರ ಹೊರತಾಗಿ, ಮುಸಲ್ಮಾನರ ಏಳಿಗೆಗಾಗಿ ಕಾಂಗ್ರೆಸ್ ಇದುವರೆಗೆ ಯಾವುದೇ ರೀತಿಯ ಯೋಜನೆಗಳನ್ನು ಕೈಗೊಂಡಿಲ್ಲ. ಇದೀಗ ಮನೆ ಹಂಚಿಕೆಯಲ್ಲಿಯೂ ಮೀಸಲಾತಿ ಹೆಚ್ಚಿಸಲಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದುಗಳನ್ನು ಟಾರ್ಗೆಟ್ ಮಾಡುತ್ತಿದೆ. ಮಂಗಳೂರು ಘಟನೆಯೇ ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರನ್ನು ಕೇವಲ ಆರೇ ತಿಂಗಳಲ್ಲಿ ವರ್ಗಾವಣೆ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮನಸ್ಥಿತಿಯಲ್ಲಿ ಈಗಿನ ಸರ್ಕಾರ ಇಲ್ಲ ಎಂದು ಆರೋಪಿಸಿದರು.
ಲೋಕಾಯುಕ್ತ ಎಸ್ಪಿ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತ ಪರಿಸ್ಥಿತಿ ನಿರ್ವಣಗೊಂಡಿದೆ. ಕಂದಾಯ ಇಲಾಖೆಯಲ್ಲಿನ ಭಷ್ಟಾಚಾರವನ್ನು ಖುದ್ದು ಸಚಿವ ಕೃಷ್ಣ ಭೈರೇಗೌಡರೇ ಬಹಿರಂಗಪಡಿಸಿದ್ದಾರೆ ಎಂದರು.