ಆನೇಕಲ್ : ಗ್ರಾಮೀಣ ಭಾಗಗಳಲ್ಲಿ ರೈತರ ಮಕ್ಕಳೇ ಅದೃಷ್ಟವಂತರು. ಉತ್ತಮ ಪರಿಸರ, ವಾತಾವರಣದಲ್ಲಿ ಬೆಳೆಯುವುದರಿಂದ ಅವರು ಆರೋಗ್ಯವಂತರಾಗಿರುತ್ತಾರೆ ಎಂದು ವೈದ್ಯ ಡಾ.ಆಂಜಿನಪ್ಪ ಹೇಳಿದರು. ತಾಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜಾಪುರ ಶ್ರೀ ಗುರುಕುಲ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶನಿವಾರ ಮೈಕ್ರೋಲ್ಯಾಬ್ ಲಿಮಿಟೆಡ್, ದೇವರಾಜ್ ಮೂಲಚಂದ್ ನಹರ್ ಚಾರಿಟಬಲ್ ಟ್ರಸ್ಟ್, ತಾಲೂಕು ಆಡಳಿತ ಹಾಗೂ ಹೆನ್ನಾಗರ ಗ್ರಾಪಂನಿಂದ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಗ್ರಾಮೀಣ ಮಕ್ಕಳಲ್ಲಿ ಶಕ್ತಿ ಹೆಚ್ಚಿರುತ್ತದೆ. ಅವರಿಗೆ ಏನನ್ನಾದರೂ ತಿಂದು ಜೀರ್ಣಿಸಿಕೊಳ್ಳುವ ಶಕ್ತಿ ಇದೆ. ಆದರೆ, ನಗರದಲ್ಲಿ ಮಾಲಿನ್ಯದಿಂದಾಗಿ ಉತ್ತಮ ಆರೋಗ್ಯ ದೊರೆಯುತ್ತಿಲ್ಲ. ಯುವಕರು ಹಣ್ಣು, ತರಕಾರಿ, ಮೊಟ್ಟೆ ಸೇರಿ ಪೌಷ್ಠಿಕಾಂಶವಿರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ವಿಜ್ಞಾನದಿಂದ ಸಮಾಜ ಉತ್ತಮವಾಗಿ ಬೆಳೆಯುತ್ತದೆ. ಮೂಢನಂಬಿಕೆಗಳಿಗೆ ಬಲಿಯಾಗದೇ ವೈಜ್ಞಾನಿಕ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ತಹಸೀಲ್ದಾರ್ ಶಶಿಧರ್ ಮಾಡ್ಯಾಳ್ ಮಾತನಾಡಿ, ಸಮಾಜದಲ್ಲಿ ಇಂತಹ ಕಾರ್ಯಕ್ರಮಗಳನ್ನು ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸುವುದರಿಂದ ವಿದ್ಯಾರ್ಥಿಗಳೊಂದಿಗೆ ಸಾರ್ವಜನಿಕರಿಗೂ ಸಹಕಾರಿಯಾಗಲಿದೆ ಎಂದರು. ರಾಜಾಪುರ ಸಂಸ್ಥಾನ ಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಹೆನ್ನಾಗರ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸುತ್ತಮುತ್ತಲಿನ 1300 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ಎಸ್ಎಸ್ಎನ್ ಟ್ರಸ್ಟ್ ರಾಜಶೇಖರ್, ಸೋಮಶೇಖರ್, ಎಡಿಎಲ್ಆರ್ ಮದನ್, ಹೆನ್ನಾಗರ ಗ್ರಾಪಂ ಅಧ್ಯಕ್ಷ ವಿನಯ್, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್, ಸದಸ್ಯ ಎಚ್.ಜೆ.ಪ್ರಸನ್ನಕುಮಾರ್, ಮಾಜಿ ಅಧ್ಯಕ್ಷ ಮಹೇಶ್, ಭಾಗ್ಯಾ ಚಂದ್ರಶೇಖರ್, ಲಲಿತಾ ರಾಜು, ಆನಂದ್, ಯಲ್ಲಾರೆಡ್ಡಿ, ಲಲಿತಾ ಗುರುದೇವ್, ಮನು, ಮುಖಂಡರಾದ ನಟರಾಜ್, ಆರ್.ಎಸ್.ಪ್ರಕಾಶ್, ಎಸ್.ಆರ್.ಎಸ್.ಚಂದ್ರಶೇಖರ್, ಸರ್ಕಾರಿ ನೌಕರರ ಸಂದ ಗೌರವ ಅಧ್ಯಕ್ಷ ಶಿವಣ್ಣ ಇದ್ದರು.