ಜಿಲ್ಲೆ

ಅಡುಗೆ ಮನೆಯಲ್ಲಿ ಕಳೆದುಕೊಂಡಿರುವ ಆರೋಗ್ಯವನ್ನು ಆಸ್ಪತ್ರೆಯಲ್ಲಿ ಹುಡುಕದೆ ಅಡುಗೆ ಮನೆಯಲ್ಲೇ ಹುಡುಕಬೇಕು

ಮೈಸೂರು: ಅಡುಗೆ ಮನೆಯಲ್ಲಿ ಕಳೆದುಕೊಂಡಿರುವ ಆರೋಗ್ಯವನ್ನು ಆಸ್ಪತ್ರೆಯಲ್ಲಿ ಹುಡುಕದೆ ಅಡುಗೆ ಮನೆಯಲ್ಲೇ ಹುಡುಕಬೇಕು. ಮುಖ್ಯವಾಗಿ ಸಿರಿಧಾನ್ಯಗಳನ್ನು ತಿನ್ನುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಪದ್ಮಶ್ರೀ ಪುರಸ್ಕೃತ ಡಾ.ಖಾದರ್ ವಲ್ಲಿ ದೊದೇಕುಲ ಹೇಳಿದರು.
ಮೈಸೂರು ಸಾಹಿತ್ಯ ಸಂಭ್ರಮದ 8ನೇ ಆವೃತ್ತಿಯಲ್ಲಿ ಶನಿವಾರ ‘ಸಿರಿಧಾನ್ಯಗಳ ಸರದಾರ’ ಸುಸ್ಥಿರ ಬದುಕನ್ನು ಬಾಳುವುದು ಹೇಗೆ? ಎಂಬ ವಿಷಯ ಕುರಿತು ಮಾತನಾಡಿದರು.

ಹಸಿರು ಕ್ರಾಂತಿಯಿಂದ ಎಲ್ಲ ನಾಶವಾಗಿದೆ. ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಚಿಕಿತ್ಸೆ ಸಿಗುತ್ತದೆ ಹೊರೆತು ಆರೋಗ್ಯ ಸಿಗಲ್ಲ. ಮಾತ್ರೆ ಮತ್ತು ವೈದ್ಯರ ಸಂಪರ್ಕ ಇಲ್ಲದೆ ಆರೋಗ್ಯವಾಗಿ ಬದುಕು ನಡೆಸಲು ಸಿರಿಧಾನ್ಯದ ಬಳಸಬೇಕು. ಜತೆಗೆ ಸಿರಿಧಾನ್ಯದ ಅಂಬಲಿ ಕುಡಿಯಬೇಕು. ಆಗ ವೈವಿಧ್ಯಮಯ ಜೀವನ ನಿಮ್ಮದಾಗುತ್ತದೆ. ಆದರೆ, ನಾವು ನಮ್ಮ ಸರಳವಾದ ಆರೋಗ್ಯ ಪದ್ಧತಿಯನ್ನು ಇದೀಗ ಕಾರ್ಪೊರೇಟ್ ಕಂಪನಿಗಳ ಬಳಿ ಅಡ ಇಟ್ಟಿದ್ದೇವೆ ಎಂದು ಬೇಸರ ವ್ಯಕ್ತ ಪಡಿಸಿದರು.

ಸಿರಿ ಧಾನ್ಯಗಳಲ್ಲಿ ಪೌಷ್ಟಿಕಾಂಶಗಳ ಭಂಡಾರವೇ ಅಡಗಿದೆ. ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲ ಬಗೆಯ ಪೌಷ್ಟಿಕ ಸತ್ವಗಳು ಕೂಡ ಈ ಧಾನ್ಯಗಳಲ್ಲಿ ಕಂಡು ಬರುತ್ತದೆ. ಮುಖ್ಯವಾಗಿ ತಾಮ್ರ, ಖನಿಕಾಂಶ, ಪ್ರೋಟೀನ್, ವಿಟಮಿನ್ಸ್ ಹಾಗೂ ಇತರ ಪೌಷ್ಟಿಕ ಸತ್ವಗಳು ಸಾಕಷ್ಟು ಪ್ರಮಾಣದಲ್ಲಿ ಇದರಲ್ಲಿ ಕಂಡು ಬರುತ್ತದೆ ಎಂದರು.

ನಾವು ತಿನ್ನುವ ಆಹಾರವೇ ರೋಗವನ್ನು ಸೃಷ್ಟಿ ಮಾಡುತ್ತಿದೆ. ಆಹಾರದಲ್ಲಿ ದೇಹಕ್ಕೆ ಅಗತ್ಯವಿರುವ ಪೋಷಕಾಂಶ ಇಲ್ಲದೇ ಇರುವುದರಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಎದೆ ಹಾಲುಣಿಸುವ ವಿಶೇಷತೆ ಇರುವುದು ಸಸ್ತನಿಗಳಲ್ಲಿ ಮಾತ್ರ. ಹಸುವಿನ ಹಾಲು ಕುಡಿಯುವುದರಿಂದ ಆರ್ಮೊನ್‌ಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಹಾಲಿನಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಇರುವುದರಿಂದ ಇದನ್ನು ಸಮತೊಕದ ಆಹಾರ ಎಂದು ಪ್ರಚಾರ ಮಾಡಲಾಗುತ್ತಿದೆ ಎಂದರು.

ಅಕ್ಕಿ, ಗೋಧಿ, ಸಕ್ಕರೆ, ಹಾಲು ಸೇವಿಸುವುದರಿಂದ ರೋಗ ಬರುತ್ತಿದೆ. ಈ ಬಗ್ಗೆ ಎಷ್ಟೇ ಹೇಳಿದರೂ ಯಾರೂ ತಲೆಗೆ ಹಾಕಿಕೊಳ್ಳುತ್ತಿಲ್ಲ. ನಮ್ಮ ಹಿರಿಯ 150 ವರ್ಷಗಳ ಹಿಂದಿನ ಆಹಾರ ಪದ್ಧತಿಯನ್ನು ರೂಢಿಸಿಕೊಂಡರೆ ಡಯಾಬಿಟಿಸ್, ಬಿಪಿ ಅಂತಹ ಕಾಯಿಲೆಗಳಿಂದ ದೂರ ಉಳಿಯಬಹುದಾಗಿದೆ ಎಂದರು.
ತಜ್ಞರು ಮತ್ತು ವೈದ್ಯರು ಸಾರ್ವಜನಿಕರಿಗೆ ಉತ್ತಮ ಆಹಾರ ಪದ್ಧತಿಯ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಅನ್ನ ತಿನ್ನಬೇಡಿ, ವಾರಕ್ಕೆ ಒಮ್ಮೆ ಉಪವಾಸ ಮಾಡಿ, ಸಿರಿಧಾನ್ಯ ಬಳಸಿ, ಹೆಚ್ಚಾಗಿ ಹಾಲು ಸೇವಿಸಬೇಡಿ ಎಂದು ಯಾವ ವೈದ್ಯನೂ ಸಲಹೆ ನೀಡುತ್ತಿಲ್ಲ. ಅಪ್ಪಿತಪ್ಪಿ ಸಲಹೆ ನೀಡಿದರೂ ಅಂತ ವೈದ್ಯರ ಬಳಿ ಯಾರೂ ಹೋಗಲ್ಲ ಎಂದರು.

ನಾವು ನವಣೆ ತಿನ್ನಬೇಕು. ನವಣೆ ತಿಂದರೆ ರಕ್ತ ಯಾವಾಗಲೂ ತಿಳಿಯಾಗಿರುತ್ತದೆ. ಆಗ ಯಾವುದೇ ರೋಗ ಬರಲ್ಲ. ರಕ್ತ ತಿಳಿಯಾಗಿದ್ದಾಗ ಪೌಷ್ಟಿಕಾಹಾರ ದೇಹದ ಎಲ್ಲೆಡೆ ತಲುಪುತ್ತದೆ. ನಮ್ಮ ರಕ್ತ ತಿಳಿಯಾಗಬೇಕಾದರೆ ನವಣೆ ಸೇರಿದಂತೆ ಸಿರಿಧಾನ್ಯಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.