ಬಂಗಾರಪೇಟೆ: ಕೆಜಿಎಫ್ ಪಿಎಲ್ಡಿ ಬ್ಯಾಂಕಿನ 5 ಸ್ಥಾನಗಳಿಗೆ ಭಾನುವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ 4, ಎನ್ಡಿಎ ಮೈತ್ರಿ ಒಂದು ಸ್ಥಾನ ಗೆಲುವು ಸಾಧಿಸಿದೆ. ಸಂಭ್ರಮಾಚರಣೆ ನೆಪದಲ್ಲಿ ಕಾಂಗ್ರೆಸ್-&ಜೆಡಿಎಸ್ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ, ಜತೆಗೆ ಮಾತಿನ ಚಕಮಕಿಯೂ ನಡೆದಿದ್ದು, ಚುನಾವಣಾ ಕೇಂದ್ರದ ಬಳಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಎದುರಾಗಿತ್ತು.
ನಿಗದಿಯಂತೆ ಭಾನುವಾರ ಪಟ್ಟಣದ ಪಿಎಲ್ಡಿ ಬ್ಯಾಂಕಿನ ಚುನಾವಣೆ ನಡೆದಿದ್ದು, 5 ಸ್ಥಾನಗಳು ಕಾಂಗ್ರೆಸ್ ಪಾಲಾಗುವ ಭರವಸೆಯಲ್ಲಿದ್ದ ಮುಖಂಡರಿಗೆ ನಿರಾಸೆಯಾಗಿ 4 ಸ್ಥಾನ ಪಡೆದುಕೊಂಡಿದೆ. ಸಾಲಗಾರರಲ್ಲದ ಕ್ಷೇತ್ರದಿಂದ ಕಾಂಗ್ರೆಸ್ನ ಹಿರಿಯ ಮುಖಂಡ ಹೊಸೂರು ಕೃಷ್ಣಪ್ಪ ಹಾಗೂ ಮೈತ್ರಿ ಅಭ್ಯರ್ಥಿ ಹುಣಸನಹಳ್ಳಿ ಎಂ.ಬಾಲಕೃಷ್ಣ ನಡುವೆ ಪೈಪೋಟಿ ನಡೆದಿದ್ದು, ಬಾಲಕೃಷ್ಣ 28 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಸಾಲಗಾರರಲ್ಲದ ಕ್ಷೇತ್ರಕ್ಕೆ ಮತದಾನ ನಡೆಯುವಾಗ ಕೆಲವು ತಪು$್ಪ ಸಂಭವಿಸಿದ್ದು, ಇದರಲ್ಲಿ ಪೊಲೀಸರು ಶಾಮಿಲಾಗಿದ್ದರಿಂದ ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಲಿಲ್ಲ. ಮತದಾನದ ವೇಳೆ ಕೆಲವು ಮೈತ್ರಿ ಪಕ್ಷದ ಮುಖಂಡರು ಮತದಾನ ಸ್ಥಳದಲ್ಲಿದ್ದುಕೊಂಡು ಕಾನೂನು ಬಾಹಿರ ಮತಯಾಚನೆ ಮಾಡಿರುವುದರಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹೊಸೂರು ಕೃಷ್ಣಪ್ಪ ಅವರಿಗೆ ಸೋಲಾಗಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದರು.
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರು ಮತದಾನದ ಸ್ಥಳದಿಂದ ಹೊರಗೆ ಹೋಗುವಾಗ ಕೆಲವು ಜೆಡಿಎಸ್ ಕಾರ್ಯಕರ್ತರು, ಮೈತ್ರಿ ಅಭ್ಯರ್ಥಿ ಎಂ.ಬಾಲಕೃಷ್ಣ ಗೆಲುವು ಸಾಧಿಸಿರುವ ಬಗ್ಗೆ ಹಿರಿಯ ಮುಖಂಡರ ಪರವಾಗಿ ಜೈಕಾರ ಹಾಕಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು, ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ 16 ಸ್ಥಾನಗಳ ಪೈಕಿ 15 ಸ್ಥಾನವನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಕೇವಲ ಒಂದು ಸ್ಥಾನ ಗೆದ್ದಿದ್ದಕ್ಕೆ ಜೈಕಾರ ಹಾಕಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅಗೌರವ ತೋರುತ್ತಿರುವುದು ಸರಿಯಲ್ಲ ಎಂದು ಹೇಳಿದ ತಕ್ಷಣ ಕಾಂಗ್ರೆಸ್-&ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಅವಹೇಳನಕಾರಿ ಘೋಷಣೆ ಕೂಗಿ ಏಕವಚನದಲ್ಲಿ ಮಾತನಾಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್-&ಜೆಡಿಎಸ್ ಮುಖಂಡರ ನಡುವೆ ತೀವ್ರ ತಳ್ಳಾಟ, ಮಾತಿನ ಚಕಮಕಿ ನಡೆಯಿತು. ಈ ನಡುವೆ ಪೊಲೀಸರು ಮಧ್ಯೆ ಪ್ರವೇಶಿಸಿ ಎರಡು ಗುಂಪನ್ನು ಚದುರಿಸಿದರು. ಸರ್ಕಾರಿ ಮಾದರಿ ಶಾಲೆಯಿಂದ ಓಸ್ವಾಲ್ ಆಸ್ಪತ್ರೆಯವರೆಗೂ ನೂಕುನುಗ್ಗಲು, ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಹರಸಾಹಸ ಮಾಡಿ ಉದ್ವಿಗ್ನ ಪರಿಸ್ಥಿತಿ ತಿಳಿಸಿಗೊಳಿಸಿದರು.
ರೌಡಿಸಂಗೆ ಅವಕಾಶ ನೀಡಲ್ಲ
ಬಂಗಾರಪೇಟೆ ಕ್ಷೇತ್ರದಲ್ಲಿ ಮೈತ್ರಿ ಪಕ್ಷ ರೌಡಿಸಂ ಮಾಡುವುದಕ್ಕೆ ಬಿಡುವುದಿಲ್ಲ. ಒಂದು ಸ್ಥಾನ ಗೆದ್ದಿರುವುದಕ್ಕೆ ಪುಂಡಾಟ ನಡೆಸಿದರೆ ಪೊಲೀಸ್ ಇಲಾಖೆಯು ಸೂಕ್ತ ಕ್ರಮಕೈಗೊಳ್ಳಬೇಕಿದೆ. ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಜೆಡಿಎಸ್ನ ಕೆಲವು ಯುವಕರು ವಿನಾಕಾರಣ ನನ್ನ ವಿರುದ್ಧ ಕೂಗಾಡಿದ್ದಾರೆ. ದುರಹಂಕಾರದಿಂದ ಮೆರೆದರೆ ಬಿಡುವುದಿಲ್ಲ. ಇವರ ಅಹಂಕಾರದ ಆಟ ಸಹಿಸುವುದಿಲ್ಲ. ಪೊಲೀಸರು ಈ ಬಗ್ಗೆ ಎಚ್ಚರವಹಿಸಬೇಕಾಗಿತ್ತು. ಪಿಎಲ್ಡಿ ಬ್ಯಾಂಕ್ನಲ್ಲಿ 99% ಗೆಲುವು ಸಾಧಿಸಿದ್ದು, ಜನ ಕಾಂಗ್ರೆಸ್ ಪರ ಎನ್ನುವುದನ್ನು ತಿಳಿದುಕೊಳ್ಳಲಿ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಎಚ್ಚರಿಸಿದರು.
"ಮೈತ್ರಿ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಹಾಗೂ ನನಗೆ ಮತದಾನ ಮಾಡಿದವರು ನೆರವಿನಿಂದ ನನ್ನ ಪ್ರತಿ ಸ್ಪರ್ಧಿ ವಿರುದ್ಧ 8 ಮತಗಳ ಅಂತರದಿಂದ ಗೆಲವು ಸಾಧಿಸಲು ಸಾಧ್ಯವಾಯಿತು. ಅಧಿಕಾರದಲ್ಲಿ ಇರುವವರೆಗೂ ಬ್ಯಾಂಕಿನಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಪಕ್ಷಾತಿತವಾಗಿ ಪ್ರತಿಯೊಬ್ಬರಿಗೂ ಸಿಗುವಂತೆ ಕ್ರಮಕೈಗೊಳ್ಳುತ್ತೇನೆ. ಜತೆಗೆ ಮುಂದಿನ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲವು ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ."
- ಹುಣಸನಹಳ್ಳಿ ಎಂ.ಬಾಲಕೃಷ್ಣ
ಮೈತ್ರಿ ಅಭ್ಯರ್ಥಿ