ದಾಂಡೇಲಿ: ಕಂಡ ಕಂಡಲ್ಲಿ ನಿಂತಿರುವ ಗುಜರಿ ವಾಹನಗಳು ದಾಂಡೇಲಿ ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿವೆ. ರೋಗ ಹರಡಲು ಕಾರಣವಾಗುತ್ತಿವೆ.
ದಾಂಡೇಲಿ ಜಿಲ್ಲೆಯ ಮೊದಲ‘ಸಿ’ ದರ್ಜೆಯ ನಗರವಾಗಿ ಬೆಳೆದಿತ್ತು. ರಾಜ್ಯದ ಪ್ರಮುಖ ಔದ್ಯೋಗಿಕ ಕೇಂದ್ರವಾಗಿ ಗುರುತಿಸಿಕೊಂಡಿತ್ತು. ಈಗ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ದೇಶದ ವಿವಿಧ ಭಾಗಗಳಿಂದ ಜನ ಇಲ್ಲಿಗೆ ಪ್ರವಾಸಕ್ಕೆ ಬರುತ್ತಾರೆ. ಆದರೆ, ಶಹರದ ರಸ್ತೆಗಳ ನಡುವಿನ ಗುಜರಿ ವಾಹನಗಳ ಅಲಂಕಾರ ಇಡೀ ನಗರದ ಮಾನವನ್ನು ಹರಾಜು ಹಾಕುತ್ತಿದೆ.
ಕಿತ್ತೂರ ಚೆನ್ನಮ್ಮ ರಸ್ತೆ, ಪಟೇಲನಗರ, ಹಳೇ ದಾಂಡೇಲಿಯಿಂದ ಕಿತ್ತೂರ ಚೆನ್ನಮ್ಮ ವೃತ್ತದತ್ತ ಬರುವರೆಗಿನ ಪ್ರದೇಶದಲ್ಲಿ ಸ್ಕ್ರ್ಯಾಪ್ ಅಂಗಡಿಗಳ ವಸ್ತುಗಳನ್ನು, ಅವುಗಳನ್ನು ತುಂಬಿದ ಮೂಟೆಗಳನ್ನು ರಸ್ತೆಯ ಪಕ್ಕದಲ್ಲೇ ಎಸೆಯಲಾಗುತ್ತಿದೆ. ಹಲವೆಡೆ ಯಾರಿಗೂ ಸಂಬಂಧವೇ ಇಲ್ಲದಂತೆ ಗುಜರಿ ವಾಹನಗಳು ಎಷ್ಟೋ ದಿನದಿಂದ ನಿಂತಿವೆ. ಇದನ್ನು ನೋಡಿದ ಜನ ‘ಛೆ ದಾಂಡೇಲಿಯೇಕೆ ಹೀಗೆ..?’ ಎಂದು ಎನ್ನುವಂತಿದೆ.
ಅನಾರೋಗ್ಯಕರ ವಾತಾವರಣ: ಇಷ್ಟು ಮಾತ್ರವಲ್ಲ, ಎಲ್ಲೆಂದರಲ್ಲಿ ಬಿದ್ದಿರುವ ಹಳೆಯ ಟಯರ್ಗಳು, ಗುಜರಿ ವಾಹನಗಳಲ್ಲಿ ನೀರು ನಿಂತು ಡೆಂಘಯಂಥ ರೋಗಗಳು ಹರಡಲು ಕಾರಣವಾಗುತ್ತಿವೆ. ನಗರದಲ್ಲಿ ಆಗಾಗ ಉಂಟಾಗುವ ಅನಾರೋಗ್ಯ ಸಮಸ್ಯೆಗೆ ಇಂಥ ಅಂಶಗಳೂ ಕಾರಣವಾಗಿವೆ.
ನಗರಸಭೆ ಗಮನ ಹರಿಸಬೇಕು: ಗುಜರಿ ಅಂಗಡಿಯವರು ರಸ್ತೆ ಪಕ್ಕ ತಮ್ಮ ಗುಜರಿ ಸಾಮಾನುಗಳನ್ನು ಎಸೆಯುವುದನ್ನು ನಿಲ್ಲಿಸಬೇಕು. ನಗರಸಭೆ ಅವರಿಗೆ ಸೂಕ್ತ ನಿರ್ದೇಶನ ನೀಡಬೇಕು. ಪಾಲಿಸದೆ ಇದ್ದರೆ ಕ್ರಮ ವಹಿಸಬೇಕು. ಯಾರದ್ದೂ ಸಂಬಂಧ ಇಲ್ಲದೆ ಬಿದ್ದಿರುವ ವಾಹನಗಳನ್ನು ನಗರಸಭೆ ವಶಕ್ಕೆ ಪಡೆದು, ವಿಲೇವಾರಿ ಪ್ರಕ್ರಿಯೆ ಮಾಡಬೇಕು ಎಂಬುದು ನಗರದ ಪ್ರಜ್ಞಾವಂತ ನಾಗರಿಕರ ಆಗ್ರಹ.
ನಗರದ ರಸ್ತೆಗಳ ಪಕ್ಕದಲ್ಲಿ ಸ್ಕ್ರ್ಯಾಪ್ಗಳ ಸಂಗ್ರಹ ಇಡಕೂಡದು. ಸ್ವಚ್ಛತೆಗೆ ನಗರಸಭೆ ಜೊತೆ ನಾಗರಿಕರೂ ಸಹಕರಿಸಬೇಕು. ಇಲಾಖೆ ಹಾಗೂ ಸಾರ್ವಜನಿಕರು ಸೇರಿ ಸ್ವಚ್ಛ, ಸುಂದರ ದಾಂಡೇಲಿ ಮಾಡಲು ಶ್ರಮ ವಹಿಸೋಣ.- ಅಶ್ವಿನ್ ಕುಮಾರ್ ಜುಟ್ಟಿ ವ್ಯಾಪಾರಸ್ಥರು ದಾಂಡೇಲಿ
ಗುಜರಿ ಅಂಗಡಿಕಾರರು ತಾವು ಸಂಗ್ರಹಿಸಿದ ವಸ್ತುಗಳನ್ನು ತಮ್ಮದೇ ಗೋಡೌನ್ನಲ್ಲಿಡಬೇಕು. ರಸ್ತೆಯ ಪಕ್ಕ ಹಾಕಿದರೆ ನಗರಸಭೆ ದಂಡ ವಿಧಿಸಿ, ಅವುಗಳನ್ನು ವಶಕ್ಕೆ ಪಡೆಯುವ ಕಾರ್ಯ ಮಾಡಲಿದೆ. ನಗರ ಸೌಂದಯೀಕರಣಕ್ಕೆ ನಗರಸಭೆಯ ಜತೆ ನಾಗರಿಕ ಸಹಭಾಗಿತ್ವವೂ ಅಗತ್ಯ. -ರಾಜಾರಾಮ ಪವಾರ ಪೌರಾಯುಕ್ತರು, ನಗರಸಭೆ, ದಾಂಡೇಲಿ