ಜಿಲ್ಲೆ

'ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಲಾಗುವುದು'

ಸುನಿಲ್ ಪೊನ್ನೇಟಿ

ಮಡಿಕೇರಿ:

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಪ್ರಾಪ್ತೆ ಮೇಲೆ ಶಿಕ್ಷಕನಿಂದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಮೇಲ್ಮನೆ ಚುನಾವಣೆ ಸಂಬಂಧ ಪ್ರಚಾರ ನಡೆಸಲು ಆಗಮಿಸಿದ್ದ ವೇಳೆ ಮಂಗಳವಾರ ಮಡಿಕೇರಿಯಲ್ಲಿ ಮಾತನಾಡಿದರು.

ಇಂಥ ಘಟನೆಗಳು ನಡೆಯದಂತೆ ಎಸ್.ಡಿ.ಎಂ.ಸಿ. ಮತ್ತು ಸರ್ಕಾರ ಹೊಂದಾಣಿಕೆ ಮಾಡಿಕೊಂಡು ಎಚ್ಚರ ವಹಿಸಲಾಗುತ್ತದೆ. ಯಾವುದೇ ವಿಚಾರ ಬಂದರೂ ನಮ್ಮ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳುತ್ತದೆ. ಎಸ್.ಡಿ.ಎಂ.ಸಿ. ಮತ್ತು ಶಿಕ್ಷರಿಂದಲೂ ಇಂಥ ಘಟನೆಗಳು ನಡೆಯದಂತೆ ಸಹಕಾರ ಬರಬೇಕು ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಸಚಿವ ನಾಗೇಂದ್ರ ಅವರೇನಾದರೂ ತಪ್ಪು ಮಾಡಿದರೆ ಅಥವಾ ಸರ್ಕಾರದ ಕಡೆಯಿಂದ ತಪ್ಪಾಗಿದ್ದರೆ ಶಿಕ್ಷೆ ಆಗುವ ಕೆಲಸ ಆಗುತ್ತದೆ. ಆದರೆ ಸಚಿವ ನಾಗೇಂದ್ರ ಅವರು ಸುಮ್ಮನೆ ರಾಜೀನಾಮೆ ಕೊಡಬೇಕೆನ್ನುವುದು ಸರಿಯಲ್ಲ. ರಾಜೀನಾಮೆ ಕೊಡಬೇಕೆಂದರೆ ಅವರು ತಪ್ಪು ಮಾಡಿದ್ದಾರೆ ಎನ್ನುವುದು ಸಾಬೀತಾಗಬೇಕಲ್ವಾ ಎಂದು ಪ್ರಶ್ನಿಸಿದರು. ಬಿಜೆಪಿಯವರು ವಿರೋಧ ಪಕ್ಷದವರಂತೆ ನಡೆದುಕೊಳ್ಳಲಿ. ಅವರು ಇನ್ನೂ ಏನೇನೋ ಹೇಳುತ್ತಾರೆ ಅದಕ್ಕೆಲ್ಲ ಉತ್ತರ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಶಾಸಕ ಡಾ. ಮಂತರ್ ಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್, ಮುನೀರ್ ಅಹಮ್ಮದ್ ಮತ್ತಿತರರು ಇದ್ದರು.