ಜಿಲ್ಲೆ

ಗವಾಯಿಗಳು ಪರೋಪಕಾರಕ್ಕಾಗಿ ಮೀಸಲಿಟ್ಟಿದ್ದ ಮಹಾನ್ ತ್ಯಾಗಿ

ಪಂಚಾಕ್ಷರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿಗಳು ನಾಡಿನ ಅಂಧ, ಅನಾಥ, ಅಂಗವಿಕಲ ಮಕ್ಕಳಿಗೆ ಆಶ್ರಯ ನೀಡಿ ಸಂಗೀತ ವಿದ್ಯೆ, ಪ್ರಸಾದ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದಾರೆ. ಆ ಮೂಲಕ ತಮ್ಮ ಬದುಕನ್ನು ಪರೋಪಕಾರಕ್ಕಾಗಿ ಮೀಸಲಿಟ್ಟಿದ್ದ ಮಹಾನ್ ತ್ಯಾಗಿಗಳಾಗಿದ್ದಾರೆ ಎಂದು ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ಶಿಷ್ಯ ಡಾ.ವೆಂಕಟೇಶ್ ಪೂಜಾರ್ ಹೇಳಿದರು.

ಶ್ರೀ ಗಾನಯೋಗಿ ಕಲಾ ಟ್ರಸ್ಟ್, ಶ್ರೀ ಅಮರೇಶ್ವರ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ವತಿಯಿಂದ ನಗರದ ಗಾನಭಾರತಿ ರಮಾಗೋವಿಂದ ಕಲಾ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳ 134ನೇ ಹಾಗೂ ಶ್ರೀ ಡಾ.ಪಂ.ಪುಟ್ಟರಾಜ ಗವಾಯಿಗಳ 111ನೇ ಜಯಂತಿ ಹಾಗೂ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಾದ್ಯಂತ ಇಂದು ಗವಾಯಿಗಳವರ ಶಿಷ್ಯ ಬಳಗ ಹಿರಿಯ ಕಲಾವಿದರಾಗಿ ಸಂಗೀತ ಸಾಹಿತ್ಯವನ್ನು ಶ್ರಿಮಂತಗೊಳಿಸಿದ್ದಾರೆ. ಅವರಿಂದ ಸಾವಿರಾರು ಜನ ಕಲಿತಿರಬಹುದು. ಲಕ್ಷಕ್ಕೂ ಹೆಚ್ಚು ಜನ ಅವರಿಂದ ಬದುಕು ಕಟ್ಟಿಕೊಂಡಿರಬಹುದು. ಆದರೆ, ಏನೂ ಸಂಬಂಧ ಇಲ್ಲದ ಕೋಟ್ಯಂತರ ಜನ ಅವರನ್ನು ನಿತ್ಯ ಸ್ಮರಿಸುತ್ತಿದ್ದಾರೆ. ಇದೇ ನಿಜವಾದ ಸಾಧನೆ, ಬದುಕು ಎಂದರು.

ಗವಾಯಿಗಳದ್ದು ಬದುಕಿ ಹೋದವರ ಕಥೆ ಅಲ್ಲ. ಬದುಕು ಕಲಿಸಿದವರ ಕಥೆಯಾಗಿದೆ. ಮಣ್ಣನ್ನು ಆಳಿ ಹೋದವರ ಕಥೆಯೂ ಅಲ್ಲ. ಮನಸ್ಸನ್ನು ಕಟ್ಟಿದವರ, ಜೀವನ ಕೊಟ್ಟವರ ಕಥೆಯಾಗಿದೆ. ಯಾರು ಬೇಕಾದರೂ ವಿದ್ಯಾವಂತರನ್ನು, ಹಣವಂತರನ್ನು ಸೃಷ್ಟಿಸಬಹುದು. ಆದರೆ, ಗವಾಯಿಗಳು ಹೃದಯವಂತರನ್ನು ಸೃಷ್ಟಿಸಿದರು ಎಂದರು.

ಪಂಚಾಕ್ಷರಿ ಗವಾಯಿ ಒಬ್ಬ ಅವರ ಗಾನಯೋಗಿಯಾಗಿದ್ದರು. ಯೋಗಿ ಎಂದು ಹೆಸರು ಬಂದಾಗ ಅಲ್ಲಿ ತ್ಯಾಗ ಇರುತ್ತದೆ. ಮತ್ತೊಬ್ಬರ ಬದುಕಿನ ಬಗ್ಗೆ ಚಿಂತನೆ ಇರುತ್ತದೆ. ಅವರು ಕಂಡ ಚಿಂತನೆ ಅವರ ಬದುಕಿನ ಅವಧಿಗೆ ಮಾತ್ರ ಮುಗಿದಿಲ್ಲ. ಅದು ಸೂರ್ಯಚಂದ್ರ ಇರುವವರೆಗೂ ಅಜರಾಮರ ಎಂದರು.

ಬರಗಾಲದ ಸಮಯದಲ್ಲಿ ಮಠಕ್ಕೂ ಕಷ್ಟ ಎದುರಾಗಿತ್ತು. ಆ ವೇಳೆ ಕೆಲವರು ಅಲ್ಲಿ ಕಲಿಯುತ್ತಿದ್ದ ಮಕ್ಕಳನ್ನು ಮನೆ ಕಳುಹಿಸುವಂತೆ ಗವಾಯಿಗಳಿಗೆ ಹೇಳಿದ್ದರು. ಆದರೆ, ಗವಾಯಿಗಳು ಮಾತ್ರ ಅವರೆಲ್ಲ ನನ್ನ ಮಕ್ಕಳು. ಕಷ್ಟ ಬಂತು ಅಂತ ಯಾರೂ ಕೂಡ ಮಕ್ಕಳನ್ನು ಹೊರಗೆ ಹಾಕಲ್ಲ. ಏನೇ ಬಂದರೂ ಮಕ್ಕಳನ್ನು ಸಾಕುತ್ತೇನೆ. ನಾನು ನುಡಿಸುವ ವಾದ್ಯಗಳನ್ನು ಮಾರಿಯಾದರೂ ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎಂದು ತಿಳಿಸಿದ್ದರು. ಅವರು ಮಕ್ಕಳನ್ನು ಯಾವ ರೀತಿ ನೋಡುತ್ತಿದ್ದರು ಎನ್ನುವುದು ಮುಖ್ಯವಾಗುತ್ತದೆ. ಮಕ್ಕಳ ವಿಷಯದಲ್ಲಿ ಎಂಥ ತ್ಯಾಗ ಇತ್ತು ಎನ್ನುವುದನ್ನು ಗಮನಿಸಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ದೊಡ್ಡ ಚೇತನಗಳಾದ ಪಂಚಾಕ್ಷರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿಗಳ ಪರಂಪರೆಯು ನಾಡಿನಾದ್ಯಂತ ಆವರಿಸಿಕೊಳ್ಳಬೇಕು. ಸಂಗೀತ, ನೃತ್ಯ ಕಲೆಗಳು ಆಕ್ರಮಿಸಿಕೊಂಡಾಗ ಮಾತ್ರ ಬೇರೆ ಚಟುವಟಿಕೆಗಳು ಕಡಿಮೆಯಾಗುತ್ತವೆ. ಪ್ರತಿಯೊಬ್ಬರೂ ಸಂಗೀತ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ ಎಂದರು.

ಇದೇ ವೇಳೆ ಶ್ರೀ ಕುಂದೂರು ಮಠದ ಡಾ.ಶ್ರೀ ಶರತ್‌ಚಂದ್ರ ಸ್ವಾಮೀಜಿ ಅವರು ‘ಗುರುಶಿಷ್ಯ ಪರಂಪರೆ ಮಹತ್ವ’ ಕುರಿತು ಉಪನ್ಯಾಸ ನೀಡಿದರು.

ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ ಅಧ್ಯಕ್ಷತೆ ವಹಿಸಿದ್ದರು. ಪಂ.ಪಂಚಾಕ್ಷರಿ ಗವಾಯಿಗಳ ಅಂಧರ ಸಂಗೀತ ಮಹಾವಿದ್ಯಾಲಯದ ಮುಖ್ಯೋಪಾಧ್ಯಾಯ ಕಳಕಪ್ಪ ವಿ.ಮುದ್ಲಾಪುರ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ಸಮಾಜ ಸೇವಕ ಎಚ್.ಎನ್.ಡಾ.ಲೋಕೇಶಪ್ಪ, ಆನಂದಕುಮಾರ್ ಕಂಬಳಿಹಾರ, ರತ್ನಮ್ಮ ಇತರರಿದ್ದರು.

ವೇದಿಕೆ ಕಾರ್ಯಕ್ರಮದ ಬಳಿಕ ಪಂ.ಸಾತಲಿಂಗಪ್ಪ ದೇಸಾಯಿ ಕಲ್ಲೂರು, ಮಳೇಮಲ್ಲೇಶ ಹೂಗಾರ, ರಘುನಂದನ್ ಗೋಪಾಲ ಹೂಗಾರ ಅವರು ‘ತಬಲ ಸೋಲೋ ಜುಗಲ್‌ಬಂದಿ’ ಕಾರ್ಯಕ್ರಮ ನೀಡಿದರು.

ಹುಬ್ಬಳಿಯ ಪಂ.ಕೃಷ್ಣೇಂದ್ರ ವಾಡೇಕರ್ ‘ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ’ ಕಚೇರಿ ನೀಡಿದರು. ಬೆಂಗಳೂರಿನ ಪಂ.ಶ್ರೀಧರ್ ಹೆಗಡೆ ‘ಸಂತೂರ್ ವಾದನ’, ಶೀಲಾ ಎ.ಹೂಗಾರ ‘ವಚನ ಸಂಗೀತ’, ವಿದ್ವಾನ್ ರಮೇಶ ಧನ್ನೂರು ‘ತಬಲ ಸಾಥ್ ಸಂಗತ್’, ವಿದ್ವಾನ್ ಪ್ರಭುರಾವ್ ಮೈಸೂರು ‘ಹಾರ‌್ಮೋನಿಯಂ ಸಾಥ್’, ವಿದ್ವಾನ್ ಶ್ರೀಮಂತ ನೀಲೂರ ಹಾಗೂ ಶಿಷ್ಯ ವೃಂದದಿಂದ ‘ತಬಲ ವಾದ್ಯತರಂಗ’ ಕಾರ್ಯಕ್ರಮ ನೆರವೇರಿತು.