ಅರಸೀಕೆರೆ ಗ್ರಾಮಾಂತರ: ರಾಜ್ಯದ ತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ತಾಲೂಕಿನ ಮಾಲೆಕಲ್ಲು ಅಮರಗಿರಿ ಲಕ್ಷ್ಮೀವೆಂಕಟರಮಣಸ್ವಾಮಿ ಮಹಾ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ತುಂತುರು ಮಳೆಯ ನಡುವೆಯೂ ಬೆಳಗ್ಗೆಯಿಂದಲೇ ಗೋವಿಂದ ನಾಮ ಸ್ಮರಣೆ ಮುಗಿಲು ಮುಟ್ಟಿತು. ಭಕ್ತರ ದಂಡಿನಲ್ಲಿ ಬಹುತೇಕರು ಬೆಟ್ಟದ ತಪ್ಪಲಿನಲ್ಲಿರುವ ದೇವಾಲಯದಲ್ಲಿನ ವೈಕುಂಠ ಅಲಂಕಾರದೊಂದಿಗೆ ಕಂಗೊಳಿಸುತ್ತಿದ್ದ ಶ್ರೀ ದೇವಿ ಸಮೇತನಾದ ಗೋವಿಂದರಾಜ ಸ್ವಾಮಿಯ ದರ್ಶನ ಪಡೆದರೆ, ಮತ್ತೆ ಕೆಲವರು ಕಡಿದಾದ ಬೆಟ್ಟವನೇರಿ ಪದ್ಮಾವತಿ ಸಮೇತನಾಗಿ ನೆಲೆಸಿರುವ ವೆಂಕಟರಮಣ ಸ್ವಾಮಿಯ ದರ್ಶನ ಪಡೆದರು.
ಆಷಾಢ ಮಾಸದ ದ್ವಾದಶಿಯಂದು ನಡೆಯುವ ಏಕೈಕ ಜಾತ್ರಾ ಮಹೋತ್ಸವ ಇದಾಗಿರುವುದರಿಂದ ನಾಡಿನ ವಿವಿಧ ಕಡೆಗಳಿಂದ ತಿಮ್ಮಪ್ಪನ ದರ್ಶನ ಪಡೆಯಲು ಭಕ್ತರು ಆಗಮಿಸಿದ್ದರು. ಹೊಸದಾಗಿ ಮದುವೆಯಾದವರು ಬೆಟ್ಟದ ಮೇಲೆ ನೆಲೆಸಿರುವ ಪದ್ಮಾವತಿ ಸಮೇತ ವೆಂಕಟರಮಣನ ದರ್ಶನ ಮಾಡಿ, ನಂತರ ರಥೋತ್ಸವದಲ್ಲಿ ಪಾಲ್ಗೊಂಡರೆ ಇಷ್ಟಾರ್ಥ ಈಡೇರುತ್ತವೆ ಎಂಬ ನಂಬಿಕೆ ಇದೆ.
ಮಧ್ಯಾಹ್ನ 1.30ರ ಸುಮಾರಿಗೆ ಸಿಂಗರಿಸಿದ ರಥದ ಮಂಟಪದಲ್ಲಿ ಶ್ರೀದೇವಿ, ಭೂದೇವಿ ಸಮೇತನಾದ ವೆಂಕಟರಮಣ ಸ್ವಾಮಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ, ಮಹಾ ಮಂಗಳಾರತಿ ನೆರವೇರಿಸಿದಂತೆಯೇ ಭಕ್ತರು ಗೋವಿಂದ ನಾಮಸ್ಮರಣೆಯೊಂದಿಗೆ ರಥ ಎಳೆದರು.
ರಥೋತ್ಸವ ವೇಳೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ತಹಸೀಲ್ದಾರ್ ಸಂತೋಷ್ ಕುಮಾರ್, ದೇವಾಲಯ ವ್ಯವಸ್ಥಾಪನಾ ಹಾಗೂ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಮುಖಂಡರು ಇದ್ದರು.
ದೇವಾಂಗ ಸಮಾಜ, ಬ್ರಾಹ್ಮಣ ಸಮಾಜ, ಈಡಿಗ ಸಮಾಜ, ಆರ್ಯವೈಶ್ಯ ಸಮಾಜ ಸೇರಿದಂತೆ ವಿವಿಧ ಸಂಘಸಂಸ್ಥೆಗಳಿಂದ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಭಕ್ತರ ಅನುಕೂಲಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.