ಮುಧೋಳ : ಹನ್ನೆರಡನೇ ಶತಮಾನದಲ್ಲಿ ಚೆನ್ನಬಸವಣ್ಣನ ಕೃಪೆಯಿಂದ ಬಸವಣ್ಣನವರ ಮನೆ ಮಹಾಮನೆಯಾಯಿತು. ಶರಣರ ಅನುಭಾವದ ನುಡಿಗಳಿಂದ ಮಹಾಮನೆ ಅನುಭವ ಮಂಟಪವಾಯಿತು ಎಂದು ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ ಹೇಳಿದರು.
ನಗರದ ದಾನಮ್ಮದೇವಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ, ಶಿಕ್ಷಣ ಶಾಸ ವಿಭಾಗ, ಸಾಂಸ್ಕೃತಿಕ ವಿಭಾಗ ಹಾಗೂ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಕಲ್ಪಿತ ಅನುಭವ ಮಂಟಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಎಂ.ಎಂ. ಹಿರೇಮಠ ಮಾತನಾಡಿ, ಶರಣರ ತತ್ವ, ಶರಣರ ಸರಳ ಬದುಕಿನ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಈ ನಾಡು ಶರಣರ ಬೀಡಾಗಿದ್ದು, ಅವರ ತತ್ವಾದರ್ಶಗಳಿಂದ ಪುಣ್ಯ ಕ್ಷೇತ್ರವಾಗಲಿ ಎಂದು ಹೇಳಿದರು.
ಇದನ್ನೂ ಓದಿ: ದೇವರನ್ನು ನಿತ್ಯ ಪೂಜಿಸಿ
ವಚನ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಡಾ.ಸಿದ್ದಣ್ಣ ಬಾಡಗಿ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎನ್.ಬಿ.ಮುರಗೋಡ ಮಾತನಾಡಿದರು. ಪಿ.ಶ್ಯಾಮಸುಂದರ, ಪ್ರೊ ವಿಶ್ವನಾಥ ಮುನವಳ್ಳಿ, ಮಹೇಶ ಕೋಟ್ಯಾಳ ಉಪಸ್ಥಿತರಿದ್ದರು.
ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಂದ ಕಲ್ಪಿತ ಅನುಭವ ಮಂಟಪದ ಗೋಷ್ಠಿ ನಡೆಯಿತು. ಅನುಭವ ಮಂಟಪಕ್ಕೆ ಅಲ್ಲಮರ ಆಗಮನ. ಅಲ್ಲಮ-ಬಸವಣ್ಣವರ ಭಕ್ತಿ ನಿಷ್ಠುರತೆ ಸಾರುವ ಸಂವಾದ, ವಿರಾಗಿಣಿ ಅಕ್ಕಮಹಾದೇವಿ-ಅಲ್ಲಮರ ವೈರಾಗ್ಯ ನಿಲುವಿನ ಚರ್ಚೆ, ಶರಣರೊಂದಿಗೆ ಗುಡ್ಡಾಪುರ ದಾನಮ್ಮ ತಾಯಿಯ ಲೌಕಿಕ-ಅಲೌಕಿಕ, ಸಂಸಾರ- ಸನ್ಯಾಸತ್ವದ ಚರ್ಚೆ-ಸಂವಾದಗಳು ನಡೆದವು.
ಚೆನ್ನಬಸವಣ್ಣ, ಸೊನ್ನಲಿಗೆ ಸಿದ್ಧರಾಮ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಲಕ್ಕಮ್ಮ ಮತ್ತು ಆಯ್ದಕ್ಕಿ ಮಾರಯ್ಯ, ಶರಣೆ ಸಂಕವ್ವೆ, ಹಡಪದ ಅಪ್ಪಣ್ಣ, ಮಡಿವಾಳ ಮಾಚಿದೇವ ಮುಂತಾದ 41 ಶರಣರ ವಚನ ಚರ್ಚಾ ಗೋಷ್ಠಿಗಳು ಜರುಗಿದವು.
ಪ್ರೊ. ಮಲ್ಲಿಕಾರ್ಜುನ ಎಂ. ಸ್ವಾಗತಿಸಿದರು. ಪ್ರೊ. ವಿ.ಎಸ್.ಮುನವಳ್ಳಿ ಪರಿಚಯಿಸಿದರು. ಪ್ರೊ. ಎನ್.ಎನ್.ಬಾರಕೇರ ವಂದಿಸಿದರು. ಪ್ರೊ ಬಿ.ಎನ್.ಬಾರಕೇರ ನಿರೂಪಿಸಿದರು.