ವಿರಾಜಪೇಟೆ : ಭಾರತ ಹಲವು ಸಂಸ್ಕೃತಿ, ಭಾಷೆ, ಕಲೆ ಸಾಹಿತ್ಯ ಹೊಂದಿರುವ ದೇಶವಾಗಿದ್ದು ಸಂಸ್ಕಾರ ಉಳಿಸುವ ಕಾರ್ಯಕ್ಕೆ ನಾವು ಬದ್ಧರಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜ ವಿರಾಜಪೇಟೆ ವತಿಯಿಂದ ನಗರದ ಚೈತನ್ಯ ಮಠಪುರ ಶ್ರೀ ಮುತ್ತಪ್ಪನ್ ದೇವಾಲಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 16ನೇ ವರ್ಷದ ಓಣಂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮುದಾಯದ ಒಗ್ಗೂಡುವಿಕೆಯಿಂದ ಮಾತ್ರ ಸಂಘಟನೆ ಬಲಿಷ್ಠವಾಗುತ್ತದೆ. ಸಮುದಾಯಗಳ ಅಭಿವೃದ್ಧಿಗಾಗಿ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿ ಮಾಡಿವೆ. ಆದ್ದರಿಂದ ಸವಲತ್ತುಗಳನ್ನು ಪಡೆಯಲು ಸಂಘಟನೆ ಮುಂದಾಗಬೇಕು ಎಂದು ಹೇಳಿದರು.
ಮುತ್ತಪ್ಪನ್ ದೇವಾಲಯದಲ್ಲಿ ದೀಪ ಬೆಳಗಿಸಿ. ಮಹಾಬಲಿಯ(ಮಾವೇಲಿ)ಯೊಂದಿಗೆ ದೇಗುಲದಿಂದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಕಣ್ಣೂರು ಜಿಲ್ಲೆಯ ಸಿಂಗಾರಿ ಮೇಳಂ, ಮಕ್ಕಳ ಛದ್ಮ ವೇಷಭೂಷಣ ಮೆರವಣಿಗೆ ಸಾತ್ ನೀಡಿದವು.
ಸಾರ್ವಜನಿಕರಿಗೆ ಓಣಂ ಸದ್ಯಾ(ವಿಶೇಷ ಭೋಜನ ) ವ್ಯವಸ್ಥೆ ಮಾಡಲಾಗಿತ್ತು. ವೇದಿಕೆಯಲ್ಲಿ ಬಹುಬಾಷ ಕವಯತ್ರಿ ಉಳುವಂಗಡ ಕಾವೇರಿ ಉದಯಾ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು, ಪುರಸಭಾ ಪೌರಕಾರ್ಮಿಕರು, ವಿವಿಧ ಕ್ಷೇತ್ರದಲ್ಲಿ ಸೇವೆಗೈದ ಸಮುದಾಯದ ಹಿರಿಯ, ಕಿರಿಯರಿಗೆ, ದಾನಿಗಳು, ಸಮಾಜ ಸೇವಕರನ್ನು ಸನ್ಮಾನಿಸಲಾಯಿತು.
ಸಂಜೆ ವೇದಿಕೆಯಲ್ಲಿ ಕೇರಳ ರಾಜ್ಯದ ಸಂಸ್ಕೃತಿ ಬಿಂಬಿಸುವ ತಿರುವಾದಿರ ನೃತ್ಯಗಳು ಹಾಗೂ ಕಣ್ಣೂರು ಜಿಲ್ಲೆಯ ಕಲಾವಿದರಿಂದ ಮೆಗಾ ಶೋ ನಡೆಯಿತು.
ಎಸ್‌ಎನ್‌ಡಿಪಿ ಕೊಡಗು ಯುನಿಯನ್ ಅಧ್ಯಕ್ಷ ವಿ.ಕೆ.ಲೋಕೇಶ್, ಹಿಂದು ಮಲಯಾಳಿ ಸಮಾಜ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ವಿ.ಎಂ.ವಿಜಯನ್, ಮುತ್ತಪ್ಪನ್ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ.ಸುಮೇಶ್, ಟಿ.ಕೆ.ರಾಜನ್, ಕೆ.ಎಸ್. ರಮೇಶ್, ಟಿ.ಎ. ನಾರಾಯಣ, ಶಾರದಾ ರಾಮನ್, ಐ.ಕೆ.ಸುದೀರ್, ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ದೇಗುಲದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು.