ಜಿಲ್ಲೆ

ಸ್ಥಳೀಯ ಕಲಾವಿದರ ದೊಡ್ಡ ಮಟ್ಟದ ಸಾಧನೆ ಶ್ಲಾಘನೀಯ: ಯದುವೀರ್

ಮಡಿಕೇರಿ: ಚಲನಚಿತ್ರ ಕ್ಷೇತ್ರದಲ್ಲಿ ಸ್ಥಳೀಯ ಕಲಾವಿದರು ದೊಡ್ಡ ಮಟ್ಟದ ಸಾಧನೆ ಮಾಡುತ್ತಿದ್ದು, ಇದು ಶ್ಲಾಘನೀಯ. ಕಲಾವಿದರಿಗೆ ಪ್ರೋತ್ಸಾಹ ಮತ್ತು ಉತ್ತೇಜನ ನೀಡುವ ಅಗತ್ಯವಿದೆ ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ತಿಳಿಸಿದರು.

ಕೊಡಗು ಕಲಾವಿದರ ಸಂಘ ಮತ್ತು ಗೋಣಿಕೊಪ್ಪ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ರಾಷ್ಟ್ರ ಪ್ರಶಸ್ತಿ ವಿಜೇತ ಕಂದೀಲು ಕನ್ನಡ ಸಿನಿಮಾದ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಹಾಗೂ ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿರಾಜಪೇಟೆ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದರು, ಪ್ರತಿಯೊಬ್ಬರ ಜೀವನಕ್ಕೆ ಅರ್ಥ ಸಿಗುವುದು ಕಲೆಯಿಂದ, ಕಲೆಯ ಬೆಳವಣಿಗೆಗೆ ಶ್ರಮಿಸುವ ಕಲಾವಿದರನ್ನು ಸನ್ಮಾನಿಸಿ ಪ್ರೋತ್ಸಾಹಿಸುವುದು ಅತ್ಯಂತ ಮಹತ್ವದ ಕೆಲಸವಾಗಿದೆ ಎಂದರು.

ಚಲನಚಿತ್ರ ಕ್ಷೇತ್ರದಲ್ಲಿ ಭಾರತೀಯರ ಕೊಡುಗೆ ಮಹತ್ವದ್ದಾಗಿದೆ. ಹಿಂದಿನ ಕಾಲದಲ್ಲಿ ಚಲನಚಿತ್ರಗಳಿಗೆ ಅಷ್ಟೊಂದು ಪ್ರೋತ್ಸಾಹ ಇರಲಿಲ್ಲ. ಆದರೆ ಇಂದು ಸ್ಥಳೀಯ ಕಲಾವಿದರು ದೊಡ್ಡಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಸಾಧನೆಗೆ ಹಾಗೂ ಸಾಧಿಸಿದ ಕಲಾವಿದರಿಗೆ ಪ್ರೋತ್ಸಾಹ ದೊರಕುತ್ತಿರುವುದು ಶ್ಲಾಘನೀಯ. ಭವಿಷ್ಯದಲ್ಲೂ ಪ್ರೋತ್ಸಾಹ ದೊರಕುವಂತಾಗಲಿ ಎಂದರು.

ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೆ ಸ್ವದೇಶಿ ಉತ್ಪನ್ನಗಳು ಹಾಗೂ ಸ್ವದೇಶಿ ಕಲೆಗಳಿಗೆ ಪ್ರೋತ್ಸಾಹ ನೀಡಬೇಕು. ಕೊಡಗಿನ ಕಲಾವಿದರಿಗೆ ಹಾಗೂ ರಾಜ್ಯದ ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸುವಂತಾಗಬೇಕು ಎಂದು ಯದುವೀರ್ ಒಡೆಯರ್ ಹೇಳಿದರು.

ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ, ಕೊಡವರು ಸಣ್ಣ ಸಮುದಾಯಕ್ಕೆ ಸೇರಿದವರಾಗಿದ್ದರೂ ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಇಂದು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಲಭಿಸಿರುವುದು ಕೊಡವರಿಗೆ ಸಂತಸದ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಕೊಡವ ಚಲನಚಿತ್ರಗಳಿಗೆ ಜನರ ಸಹಕಾರದ ಅಗತ್ಯವಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೊಡವ ಚಿತ್ರಗಳನ್ನು ನೋಡಿ ಕೊಡವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.

ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚೆರಿಯಪಂಡ ಸುರೇಶ್ ಮಾತನಾಡಿ, ಬೆಂಗಳೂರು ಕೊಡವ ಸಮಾಜದಿಂದ ಯುವ ಪ್ರತಿಭೆಗಳಿಗೆ ಕ್ರೀಡಾ ಕೇಂದ್ರ ಆರಂಭಿಸುವ ಯೋಜನೆಯಿದ್ದು, ಕೊಡವ ಭಾಷೆ ಉಳಿವಿಗೆ, ಸಾಹಿತ್ಯದ ಬೆಳವಣಿಗೆಗೆ ಸಹಕಾರ ನೀಡಲಾಗುವುದು. ಅಲ್ಲದೆ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹರಿದಾಸ ಅಪ್ಪಚ್ಚಕವಿ ಅವರ ಜನ್ಮದಿನಾಚರಣೆಯಂದು ಪುಸ್ತಕ ಬಿಡುಗಡೆ ಮಾಡಲಾಗುವುದೆಂದು ತಿಳಿಸಿದರು.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಮಾತನಾಡಿ, ನಮ್ಮದೇ ಊರಲ್ಲಿ, ನಮ್ಮ ಕೆಲಸಕ್ಕೆ ಪ್ರೋತ್ಸಾಹ ದೊರೆಯುತ್ತಿರುವುದು ಸಂತೋಷ. ಹಲವು ಸವಾಲುಗಳ ನಡುವೆ ಕುಟುಂಬದ ಬೆಂಬಲದಿಂದ ಮುಂದೆ ಬರಲು ಸಾಧ್ಯವಾಯಿತು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ, ಹಲವು ವರ್ಷಗಳ ಹಿಂದೆ ಕೊಡಗಿನಲ್ಲಿ ಸಿನಿಮಾ ಎಂದರೆ ಮೂಗು ಮುರಿಯುವವರ ಸಂಖ್ಯೆ ಹೆಚ್ಚು ಇತ್ತು. ಹೆಣ್ಣು ಮಕ್ಕಳನ್ನು ಚಿತ್ರರಂಗಕ್ಕೆ ಬಿಡುತ್ತಿರಲಿಲ್ಲ, ಆದರೆ ಸಣ್ಣುವಂಡ ಶಶಿಕಲಾ ಅವರು ಕನ್ನಡ ಸಿನಿಮಾಕ್ಕೆ ಮೊದಲ ಕೊಡವ ಮಹಿಳೆಯಾಗಿ ಪಾದಾರ್ಪಣೆ ಮಾಡಿ ಕೊಡವರಿಗೆ ಸ್ಫೂರ್ತಿಯಾಗಿದ್ದಾರೆ. ಅಂದಿನಿಂದ ಇಂದಿನವರೆಗೆ ಸಮುದಾಯದ ಹಲವು ಮಂದಿ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇಂದು ನಿರ್ಮಾಪಕಿಯಾಗಿ ಯಶೋಧ ಪ್ರಕಾಶ್ ಅವರು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲೂ ಮತ್ತಷ್ಟು ಯುವ ಪ್ರತಿಭೆಗಳು ಚಿತ್ರರಂಗದಲ್ಲಿ ಸಾಧನೆ ಮಾಡುವಂತಾಗಲಿ ಎಂದರು.

ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಎಸ್.ಅರುಣ್ ಮಾಚಯ್ಯ, ಸಮಾಜ ಸೇವಕ ನೆರವಂಡ ಉಮೇಶ್, ರಾಷ್ಟ್ರ ಪ್ರಶಸ್ತಿ ವಿಜೇತ ಕಂದೀಲು ಚಿತ್ರದ ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಬಾಲ ನಟಿ ಕುಶಿ ಕಾವೇರಮ್ಮ, ಕರ್ನಾಟಕ ಜಾನಪದ ಪರಿಷತ್‌ನ ಕೊಡಗು ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಕಂದೀಲು ಕನ್ನಡ ಸಿನಿಮಾದ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್, ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಸಂಸದ ಯದುವೀರ್ ಒಡೆಯರ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚೆರಿಯಪಂಡ ಸುರೇಶ್, ಕಂದೀಲು ಚಿತ್ರದ ಬಾಲನಟಿ ಈರಮಂಡ ಕುಶಿ ಕಾವೇರಮ್ಮ, ರಾಜ್ಯ ಪ್ರಶಸ್ತಿ ವಿಜೇತ ನಾಡ ಪೆದ ಆಶಾ ಕೊಡವ ಚಲನಚಿತ್ರದ ನಿರ್ಮಾಪಕಿ ಹಾಗೂ ನಾಯಕಿ ಈರಮಂಡ ಹರಿಣಿ ವಿಜಯ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಕಲಾ ತಂಡಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.