ಜಿಲ್ಲೆ

ಬೈದರು ಎಂಬ ಕಾರಣಕ್ಕೆ ಅಜ್ಜಿಯನ್ನು ಹತ್ಯೆ ಮಾಡಿದ ಮೊಮ್ಮಗ : ವೆಬ್‌ಸೀರೀಸ್ ಈತನಿಗೆ ಪ್ರೇರಣೆ..!

ಮೈಸೂರು: ಅಜ್ಜಿ ಬೈದರು ಎಂದು ಕೋಪಗೊಂಡ ಮೊಮ್ಮಗ ಅಜ್ಜಿಯನ್ನು ಹತ್ಯೆ ಮಾಡಿ ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕೆಆರ್‌ಎಸ್ ಹಿನ್ನೀರಿನ ಬಳಿಯಲ್ಲಿ ಸುಟ್ಟು ಹಾಕಿದ ಪ್ರಕರಣವನ್ನು ಬೇಧಿಸಿರುವ ಜಿಲ್ಲಾ ಪೊಲೀಸರು ಆರೋಪಿಯನ್ನು ಬುಧವಾರ ಬಂಧಿಸಿದ್ದಾರೆ. ಈತನಿಗೆ ಅಜ್ಜಿಯನ್ನು ಹತ್ಯೆ ಮಾಡಲು ಹಾಗೂ ಮೃತದೇಹವನ್ನು ಸುಟ್ಟು ಹಾಕಲು ವೆಬ್‌ಸೀರೀಸ್ ಪ್ರೇರಣೆ..!

ನಗರದ ಗಾಯಿತ್ರಿಪುರಂ ನಿವಾಸಿ ಸುಪ್ರೀತ್(23) ಬಂಧಿತ ಆರೋಪಿ. ಈತ ತನ್ನ ಅಜ್ಜಿ ಸುಲೋಚನ (75) ಎಂಬವರನ್ನು ಜೂ.28 ರಂದು ಹತ್ಯೆ ಮಾಡಿದ್ದ. ಈತನಿಗೆ ಅಜ್ಜಿ ಸದಾ ಬೈಯ್ಯುತ್ತಿದ್ದರು ಎನ್ನಲಾಗಿದೆ. ಈ ಬೈಗುಳ ಕೊಲೆಯಲ್ಲಿ ಅಂತ್ಯಗೊಂಡಿದೆ.

ಆರೋಪಿಯು ಅಜ್ಜಿಯನ್ನು ಹತ್ಯೆ ಮಾಡಿದ ನಂತರ ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ರಟ್ಟಿನ ಬಾಕ್ಸ್‌ನಲ್ಲಿ ಹಾಕಿಕೊಂಡು ಕಾರಿನಲ್ಲಿ ಕೆಆರ್‌ಎಸ್ ಹಿನ್ನೀರಿನ ಬಳಿಗೆ ಕೊಂಡೊಯ್ದು ಸುಟ್ಟು ಹಾಕಿದ್ದಾನೆ. ಮೃತದೇಹ ಅರೆಬೆಂದ ಸ್ಥಿತಿಯಲ್ಲಿ ಜೂ.30 ರಂದು ಪತ್ತೆಯಾಗಿತ್ತು. ಈ ಸಂಬಂಧ ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಂಡ ರಚಿಸಿದ್ದರು. ತನಿಖೆಯ ವೇಳೆಯಲ್ಲಿ ಮೊಮ್ಮಗನೇ ಅಜ್ಜಿಯನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ವೆಬ್‌ಸೀರೀಸ್ ನೋಡುತ್ತಿದ್ದ

‘ಆರೋಪಿಯ ಹೇಳಿಕೆಯ ಪ್ರಕಾರ ಆತನಿಗೆ ಅಜ್ಜಿಯನ್ನು ಹತ್ಯೆ ಮಾಡುವ ಉದ್ದೇಶ ಇರಲಿಲ್ಲ. ಅಜ್ಜಿಯೊಂದಿಗೆ ಜಗಳವಾಡುತ್ತಿದ್ದ ಸಂದರ್ಭ ಆತ ಅಜ್ಜಿಯನ್ನು ದೂಡುತ್ತಾನೆ. ಆ ಸಂದರ್ಭ ಅಜ್ಜಿಯ ತಲೆಗೆ ಬಲವಾದ ಪೆಟ್ಟು ಬೀಳುತ್ತದೆ. ಇದರಿಂದ ಗಾಬರಿಗೊಂಡ ಆತ ತಲೆದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡುತ್ತಾನೆ. ಆತ ಸಾಕಷ್ಟು ವೆಬ್‌ಸೀರೀಸ್ ನೋಡುತ್ತಿದ್ದ. ಆತ ನೋಡಿದ ವೆಬ್ ಸೀರೀಸ್‌ನಲ್ಲಿ ಹತ್ಯೆ ನಂತರ ಮೃತದೇಹವನ್ನು ಯಾವ ರೀತಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮರೆ ಮಾಚಬೇಕು ಎಂಬುದನ್ನು ನೋಡಿ ತಿಳಿದುಕೊ ಂಡಿರುತ್ತಾನೆ. ಆ ಪ್ರಕಾರನೇ ಆತ ನಿರ್ಜನ ಪ್ರದೇಶವನ್ನು ಆಯ್ಕೆಮಾಡಿಕೊಂಡು ಸುಟ್ಟು ಹಾಕಿದ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಮೈಸೂರು ಗ್ರಾಮಾಂತರ ಸಿಪಿಐ ಜಿ.ಸ್ವರ್ಣ, ಇಲವಾಲ ಪಿಎಸ್‌ಐ ಸುರೇಶ್ ಬೋಪಣ್ಣ, ಸಿಬ್ಬಂದಿ ರವಿಕುಮಾರ್, ಧರ್ಮ, ಸಿದ್ದವೀರಪ್ಪ, ಪ್ರಕಾಶ್, ಜಗದೀಶ್ ಶೆಟ್ಟಿ, ಆನಂದ್, ಮನೋಹರ್‌, ಅರುಣೇಶ್, ಮಂಜುನಾಥ್, ನಿಂಗರಾಜಗೌಡ, ವಸಂತ್ ಪಾಲ್ಗೊಂಡಿದ್ದರು.