ಶ್ರೀರಂಗಪಟ್ಟಣ: ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವವನ್ನು ಗ್ರಾಮಸ್ಥರು ವಿಜೃಂಭಣೆಯಿಂದ ಆಚರಿಸಿದರು.
ಪಟ್ಟಣ ಸಮೀಪದ ಪಶ್ಚಿಮವಾಹಿನಿಯ ಕಾವೇರಿ ನದಿ ತೀರದಿಂದ ದೇವರ ಉತ್ಸವಕ್ಕೆ ಮಡಿಪೂಜೆ ಸೇರಿದಂತೆ ಸಂಪ್ರದಾಯ ಪೂಜೆಗಳನ್ನು ವಾರದ ದಾಸಪ್ಪನ ನೇತೃತ್ವದಲ್ಲಿ ನೆರವೇರಿಸಿ ಉತ್ಸವದೊಂದಿಗೆ ವೀರ ಮಕ್ಕಳ ಸಹಿತ ಪಂಜಿನ ಸೇವೆ, ಕರ್ಪೂರದ ಸೇವೆ, ಈಡುಗಾಯಿ ಸೇವೆ ಹಾಗೂ ಹಣ್ಣು-ಕಾಯಿಗಳ ಅರ್ಪಣೆಗಳೊಂದಿಗೆ ದೀಪ-ಧೂಪಗಳೊಂದಿಗೆ ತಮಟೆ-ನಗಾರಿ ಸದ್ದಿನೊಂದಿಗೆ ಗ್ರಾಮಕ್ಕೆ ಕರೆತರಲಾಯಿತು.
ಗ್ರಾಮ ಪ್ರವೇಶಕ್ಕೂ ಮೊದಲು ಹೆಬ್ಬಾಗಿಲಲ್ಲಿ ಹರಕೆ ಬಲಿ ಒಪ್ಪಿಸಿದ ಬಳಿಕ ಗ್ರಾಮದ ವಿವಿಧ ಬೀದಿಗಳಲ್ಲಿ ತಡರಾತ್ರಿಯವರೆಗೂ ತಾಯಿಯ ಉತ್ಸವ ಹೊತ್ತು ಸಾಗಿದ್ದು, ಮನೆಯ ಮುಂಭಾಗಿಲಿಗೆ ಆಗಮಿಸಿದ ದೇವಿಗೆ ಕುಟುಂಬಸ್ಥರು ಭಕ್ತಿಭಾವದಿಂದ ಪೂಜೆ ಕೈಂಕರ್ಯಗಳನ್ನು ನೆರವೇರಿಸಿ ಒಳಿತಿಗಾಗಿ ಪ್ರಾರ್ಥಿಸಿದರು.
ಗ್ರಾಮದ ಯಜಮಾನ ಶ್ರೀಧರ್, ಹತ್ತಿರದ ಮನುಷ್ಯ ಶ್ರೀನಿವಾಸ್ ಹಾಗೂ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.