ಜಿಲ್ಲೆ

ಶ್ರೀ ಕೆಂಚಾಂಬಿಕೆ ದೇವಿಯ ದೊಡ್ಡ ಜಾತ್ರೆಗೆ ಚಾಲನೆ

ಆಲೂರು: ತಾಲೂಕಿನ ಕೆ.ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಹಾಸನಾಂಬೆ ದೇವಿಯ ಹಿರಿಯ ಸಹೋದರಿ ಶ್ರೀ ಕೆಂಚಾಂಬಿಕೆ ದೇವಿಯ ದೊಡ್ಡ ಜಾತ್ರೆಗೆ ಭಾನುವಾರ ಅಧಿಕೃತ ಚಾಲನೆ ದೊರೆಯಿತು.

ಮೇ 4ರಿಂದ 11ರವರೆಗೆ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿವೆ. ದೇವಿಯ ಮೂಲ ದೇವಸ್ಥಾನದಲ್ಲಿ ಪಾದ ಪೂಜೆ, ಸಾರು, ವಸಂತ ಸೇವೆ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ಮೇ 7ರಂದು ಪಾದ ತೂಗುವ ಜಾತ್ರೆ ನಡೆಯಲಿದೆ. ನಂತರ ವಸಂತ ಉತ್ಸವ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಲಿದೆ.

ಮೇ10 ರಾತ್ರಿ 8ಗಂಟೆಗೆ ಮೂಲ ದೇವಸ್ಥಾನದಲ್ಲಿ ಉಧ್ವಾರ್ಚನೆ, ಸಪ್ತಮಾತೃಕಾ ಸಹಿತ ಶ್ರೀ ಕೆಂಚಾಂಬಿಕೆಗೆ ಮಹಾಪೂಜೆ, ಸುಗ್ಗಿ, ಮಹಾಮಂಗಳಾರತಿ ಜರುಗಲಿದೆ. ಮರುದಿನ ಬೆಳಗ್ಗೆ ಮೂಲ ದೇವಸ್ಥಾನದಿಂದ ಹೊರಡುವ ದೇವಿಯ ಒಡವೆ, ಮುಖ, ಪಾದುಕೆ, ಬೆಳ್ಳಿ ಹೆಡಿಗೆ, ಪುಷ್ಪ, ಉತ್ಸವ ಮೂರ್ತಿಗಳ ಮೆರವಣಿಗೆ ದೇವಾಲಯಕ್ಕೆ ತಲುಪಿ ಅಲಂಕಾರ, ಅಭಿಷೇಕ, ಪೂಜೆ, ಬಲಿಪ್ರದಾನದ ನಂತರ ಮಹಾಮಂಗಳಾರತಿ ಸಂಪನ್ನವಾಗುತ್ತದೆ. ಮಧ್ಯಾಹ್ನ 2ಗಂಟೆಗೆ ಬನ್ನಿ ಮಂಟಪದಲ್ಲಿ ಶ್ರೀ ದೇವಿ ಹಾಗೂ ವೀರಭದ್ರ ದೇವರ (ಭಂಟ) ಸಮಾಗಮ ಆಗಲಿದೆ. ರಾತ್ರಿ 10.30ರವರೆಗೆ ಪಾದ ನಮಸ್ಕಾರ ನೆರವೇರಿದ ನಂತರ ಮಂಗಳಾರತಿ, ಅಲಂಕಾರ ವಿಸರ್ಜನೆಗೊಂಡು ಮೂಲ ದೇವಸ್ಥಾನಕ್ಕೆ ಶ್ರೀದೇವಿಯ ಮೆರವಣಿಗೆ ಸೇರಿದ ಬಳಿಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.