ಮಾರಮ್ಮ ತಾಯಿಯ ವಾರ್ಷಿಕ ಪೂಜಾ ಮಹೋತ್ಸವ ಪ್ರಯುಕ್ತ ಕೆ.ಆರ್.ನಗರದ ಶ್ರೀರಾಮ ಬಡಾವಣೆಯಲ್ಲಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. 
ಜಿಲ್ಲೆ

ವಿಜೃಂಭಣೆಯ ಶ್ರೀ ಮಾರಮ್ಮ ತಾಯಿ ಪೂಜಾ ಮಹೋತ್ಸವ

ಕೆ.ಆರ್.ನಗರ: ಪಟ್ಟಣದ ಶ್ರೀರಾಮ ಬಡಾವಣೆಯ ಬೋವಿ ಸಮುದಾಯದ ಗ್ರಾಮದೇವತೆ ಶ್ರೀ ಮಾರಮ್ಮ ತಾಯಿಯ 39ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ  ವಿಜೃಂಭಣೆಯಿಂದ ನಡೆಯಿತು.

ಮುಂಜಾನೆ 6 ಗಂಟೆ ಬ್ರಾಹ್ಮಿ ಮೂಹೂರ್ತದಲ್ಲಿ ದೇವರ ಉತ್ಸವ ಮೂರ್ತಿಗೆ ಪಟ್ಟಣದ ಹೊರವಲಯದಲ್ಲಿರುವ ಹಳೇ ಎಡತೊರೆಯ ಕಾವೇರಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ಒಡವೆ, ವಸ್ತ್ರ, ಹೂವುಗಳಿಂದ ಅಲಂಕರಿಸಲಾಯಿತು. ಬಳಿಕ ನದಿ ದಡದಲ್ಲಿ ಪೂಜೆ ಪುರಸ್ಕಾರಗಳನ್ನು ನೆರವೇರಿಸಲಾಯಿತು. ಕಳಸ ಹೊತ್ತ ಮುತ್ತೈದೆಯರೊಂದಿಗೆ ದೇವರ ಉತ್ಸವ ಮೂರ್ತಿಯನ್ನು ತಮಟೆ, ಛತ್ರಿ, ಛಾಮರ ಮತ್ತು ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.

ಮೈಸೂರು-ಹಾಸನ ರಸ್ತೆಯ ಮಾರ್ಗವಾಗಿ ತಾಯಿ ಉತ್ಸವ ಮೂರ್ತಿಯನ್ನು ತಂದು ಶ್ರೀರಾಮ ಬಡಾವಣೆಯ ವಿವಿಧ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಆ ನಂತರ ಆಲಯ ಪ್ರವೇಶ ಮಾಡಲಾಯಿತು. ಮಾರಮ್ಮ ತಾಯಿಗೆ ಅಭಿಷೇಕ, ಪೂಜೆ, ಮಹಾಮಂಗಳಾರತಿಯನ್ನು ನೆರವೇರಿಸಿ ಭಕ್ತಿಯಿಂದ ಪೂಜಿಸಲಾಯಿತು. ಬಡಾವಣೆಯ ನಿವಾಸಿಗಳು ಸರತಿ ಸಾಲಿನಲ್ಲಿ ನಿಂತು ದೇವಿಗೆ ಪೂಜೆ ಸಲ್ಲಿಸುವ ಮೂಲಕ ದರ್ಶನ ಪಡೆದು ಪುನೀತರಾದರು. ನಂತರ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಮಜ್ಜಿಗೆ, ಪಾನಕ ಮತ್ತು ಪ್ರಸಾದ ವಿನಿಯೋಗ ಮಾಡಲಾಯಿತು.

ಮಾಜಿ ಸಚಿವ ಸಾ.ರಾ.ಮಹೇಶ್, ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ, ನವ ನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ನಿವೃತ್ತಾ ತಂಬಾಕು ಮಂಡಳಿ ಅಧಿಕಾರಿ ಕೆ.ಎನ್.ದಿನೇಶ್, ಕಾಂಗ್ರೆಸ್ ಮುಖಂಡರಾದ ಪುಟ್ಟರಾಜು, ಪೆರಿಸ್ವಾಮಿ ದೇವರ ದರ್ಶನ ಪಡೆದರು. ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಬೋವಿ ಯುವಕರ ಸಂಘದ ತಾಲೂಕು ಅಧ್ಯಕ್ಷ ಶಿವು, ಶ್ರೀ ಮಾರಮ್ಮ ದೇವಿ ಭೋವಿ ಟ್ರಸ್ಟ್ ಅಧ್ಯಕ್ಷ ನಾಗರಾಜು, ಮುಖಂಡರಾದ ಕೆ.ಎಸ್.ನಾಗೇಶ್, ಕುಮಾರ್, ದೇವರಾಜ್, ಏಸುರಾಜು, ರಾಜಶೇಖರ್, ಲಕ್ಷ್ಮಿನಾರಾಯಣ, ಸತ್ಯಣ್ಣ, ಬಾಲಸುಬ್ರಮಣ್ಯ, ಸುಬ್ಬಣ್ಣ, ಸೋಮ, ನಾಗರಾಜು, ಪುರುಷೋತ್ತಮ್, ಶ್ರೀನಿವಾಸ್, ಮಂಜುನಾಥ್ ಇತರರು ಹಾಜರಿದ್ದರು.