ಜಿಲ್ಲೆ

ಎಲ್ಲ ಕಾಲಕ್ಕೂ ಗುರುವಿನ ಅನುಗ್ರಹ ಅಪೇಕ್ಷಣೀಯ

ಯಲ್ಲಾಪುರ: ಗುರುವಿನ ಅನುಗ್ರಹ ಎಲ್ಲ ಕಾಲಕ್ಕೂ , ಎಲ್ಲ ಕಾರ್ಯಗಳಲ್ಲಿಯೂ ಅಪೇಕ್ಷಿತವಾದುದು ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ತಾಲೂಕಿನ ಉಮ್ಮಚಗಿಯ ಗುರುಮೂರ್ತಿ ಬಡಾವಣೆಯ ಶ್ರೀ ಗುರುಮೂರ್ತಿ ಮಂದಿರದ ಶಿಖರ ಕಲಶ ಪ್ರತಿಷ್ಠೆ ನೆರವೇರಿಸಿ ಆಶೀರ್ವಚನ ನೀಡಿದರು.

ನಿಷ್ಕಲ್ಮಶ ಪ್ರಾರ್ಥನೆಗೆ ಮಾತ್ರ ಗುರು ಒಲಿದು, ಜೀವನದ ಶ್ರೇಯಸ್ಕರ ಮಾರ್ಗವನ್ನು ತೋರುತ್ತಾನೆ. ಇಂತಹ ಕಾರ್ಯಕ್ರಮಗಳು ಎಲ್ಲೆಡೆಯೂ ಇನ್ನಷ್ಟು ಹೆಚ್ಚಲಿ ಎಂದು ಹಾರೈಸಿದರು.

ಸಾನ್ನಿಧ್ಯ ವಹಿಸಿದ್ದ ಸಿದ್ದಾಪುರದ ಶಿರಳಗಿಯ ಶ್ರಿ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದಭಾರತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಗುರುತತ್ವವೆಂದರೆ ಪರಮಾತ್ಮನ ಆಶೀರ್ವಚನವೇ ಆಗಿದೆ. ಇದನ್ನು ಸಾಧಿಸಲು ಏಕಾಗ್ರತೆ ಮತ್ತು ಚಿತ್ತಶುದ್ಧಿಗಳು ಅತ್ಯಗತ್ಯ. ಗುರುತಿಸುವ ಪ್ರತ್ಯಕ್ಷವ್ಯಕ್ತಿ ಗುರುವೇ ಆಗಿದ್ದಾನೆ. ಗುರುಗಳ ಆರಾಧನೆಯೇ ಪರಮಾತ್ಮನ ಚಿಂತನೆಯಾಗಿದೆ. ನಿರಂತರ ಭಗವಂತನ ಸಾಕ್ಷಾತ್ಕಾರದ ಸ್ವರೂಪ ಕಾಣಿಸುತ್ತಿರುವುದು ನಮ್ಮ ದೇಶದ ವಿಶೇಷವಾಗಿದೆ ಎಂದರು.

3 ದಿನಗಳ ಕಾಲ ನಡೆದ ಮಹಾರುದ್ರಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ 50 ಕ್ಕಿಂತ ಹೆಚ್ಚು ಸಂಖ್ಯೆಯ ವೈದಿಕರು ಪಾಲ್ಗೊಂಡಿದ್ದರು. ಪಾಠಶಾಲೆಯ ಅಧ್ಯಾಪಕ ವಿ. ಮಹೇಶ ಭಟ್ಟ ಇಡಗುಂದಿ ನಿರ್ವಹಿಸಿದರು. ಶ್ರೀಪಾದ ಹೆಗಡೆ ಭಟ್ರಕೇರಿ ಸ್ವಾಗತಿಸಿದರು. ನಾರಾಯಣ ಹೆಗಡೆ ಕುಂಬ್ರಿಗುಡ್ಡೆ ವಂದಿಸಿದರು.