ವೆಂಕಟರಾವ ನಾಡಗೌಡ 
ಜಿಲ್ಲೆ

ಜೋಳ ಖರೀದಿಯಲ್ಲಿ ಸರ್ಕಾರದ ದ್ವಂದ್ವ ನೀತಿ

ನರೇಶ್ ಕುಮಾರ್

ಸಿಂಧನೂರು: ಜೋಳ ಖರೀದಿ ವಿಚಾರದಲ್ಲಿ ಸರ್ಕಾರ ದ್ವಂದ್ವ ನೀತಿ ಅನುಸರಿಸಿದ್ದರಿಂದಲೇ ಸಮಸ್ಯೆ ಉದ್ಭವವಾಗಿ, ರೈತರಿಗೆ ಅನ್ಯಾಯವಾಗಿದೆಂದು ಮಾಜಿ ಸಚಿವ ವೆಂಕಟರಾವ ನಾಡಗೌಡ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಂಗಾರು ಮತ್ತು ಹಿಂಗಾರಿನಲ್ಲಿ ರೈತರು ಅಪಾರ ಪ್ರಮಾಣದಲ್ಲಿ ಜೋಳ ಬೆಳೆದಿದ್ದಾರೆ. ಎಲ್ಲ ಜೋಳ ಖರೀದಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ, ಖರೀದಿ ಕೇಂದ್ರದಲ್ಲಿ ವಿಳಂಬ ಮಾಡಿದ್ದಲ್ಲದೆ, ಗೊಂದಲವೂ ಸೃಷ್ಟಿಸಲಾಗಿದೆ. ಈಗ ರೈತರ ಜೋಳ ಸರಿಯಾಗಿಲ್ಲ. ಮೊಳಕೆಯೊಡೆದಿದೆ, ಹುಳು ಹತ್ತಿವೆ ಎಂದು ಹೇಳುತ್ತಿರುವುದು ಸರಿಯಲ್ಲ. ಈ ಸಂಬಂಧ ಆಹಾರ ಸಚಿವರ‌್ನು ಭೇಟಿಯಾಗಿ, ರೈತರ ಸಮಸ್ಯೆ ಮನವರಿಕೆ ಮಾಡಿರುವುದಾಗಿ ತಿಳಿಸಿದರು.

ಶಾಸಕರು ಮೊದಲೇ ತಾಲೂಕಿ ರೈತರ ಎಲ್ಲ ಜೋಳ ಖರೀದಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕಿತ್ತು. ಆದರೆ, ರೈತರು ಹೋರಾಟಕ್ಕಿಳಿದಾಗ ಸರ್ಕಸ್ ಮಾಡುವುದು ಏನಿತ್ತು?. ಕೂಡಲೇ ಸರ್ಕಾರ ಯಾವ ಕಾರಣವು ನೀಡದೇ, ಖರೀದಿ ಕೇಂದ್ರಕ್ಕೆ ನೋಂದಣಿಯಾದ ಜೋಳವನ್ನು ಖರೀದಿಸಬೇಕೆಂದು ಒತ್ತಾಯಿಸಿದರು.

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ದುರಸ್ತಿ ನೆಪವೊಡ್ಡಿ ಕೇವಲ 80 ಟಿಎಂಸಿ ನೀರು ಸಂಗ್ರಹಿಸಲಿದ್ದು ಒಂದೇ ಬೆಳೆಗೆ ನೀರು ಎನ್ನುವ ಸುದ್ದಿ ಹರಡಿದೆ. ಕಳೆದ ನಾಲ್ಕು ತಿಂಗಳು ಸರ್ಕಾರ ಏನು ಮಾಡಿತು. ಈಗ ಜಲಾಶಯ ಒಳಹರಿವು ಹೆಚ್ಚಿರುವ ಸಂದರ್ಭದಲ್ಲಿ ದುರಸ್ತಿಗೆ ಮುಂದಾಗಿರುವುದರಲ್ಲಿ ಅರ್ಥವಿಲ್ಲ. ಐಸಿಸಿ ಸಭೆಯಲ್ಲಿ ಎರಡು ಬೆಳೆಗೆ ನೀರು ಹರಿಸಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು. ಪ್ರಮುಖರಾದ ಧರ್ಮನಗೌಡ ಮಲ್ಕಾಪುರ, ಅಶೋಕಗೌಡ ಗದ್ರಟಗಿ, ಟಿಎಂ ಪಾಟೀಲ್, ಅಲ್ಲಮಪ್ರಭು ಪೂಜಾರಿ, ರವಿಕುಮಾರ ಪನ್ನೂರು, ನಗರಸಭೆ ಸದಸ್ಯ ಚಂದ್ರಶೇಖರ ಮೈಲಾರ ಇದ್ದರು.