ಗೋವಿಂದಾಪುರ ಆಶ್ರಯ ಬಡಾವಣೆಯಲ್ಲಿ ಏರ್ಪಡಿಸಿದ್ದ ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಸತಿ ಸಚಿವ ಜಮೀರ್ ಅಹ್ಮದ್ ಕೀ ಹಸ್ತಾಂತರಿಸಿದರು. ಮಧು ಬಂಗಾರಪ್ಪ, ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಡಾ. ಕವಿತಾ ಯೋಗಪ್ಪನವರ್ ಇತರರಿದ್ದರು.  
ಜಿಲ್ಲೆ

ಹೆಚ್ಚುವರಿ ಮೊತ್ತ ಸರ್ಕಾರವೇ ಭರಿಸಲಿದೆ: ಜಮೀರ್ ಭರವಸೆ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಈ ಹಿಂದೆ ಮಂಜೂರಾಗಿದ್ದ ಆಶ್ರಯ ಮನೆಗಳ ನಿರ್ಮಾಣ ವಿಳಂಬವಾದ ಕಾರಣ ಫಲಾನುಭವಿಗಳಿಗೆ ಎರಡು ಲಕ್ಷ ರೂ. ಹೆಚ್ಚುವರಿ ಹೊರೆಯಾಗಿದೆ. ಈ ಹೆಚ್ಚುವರಿ ಮೊತ್ತವನ್ನು ಸರ್ಕಾರದಿಂದಲೇ ಭರಿಸಲಾಗುವುದು. ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಹೇಳಿದರು.

ಗೋವಿಂದಾಪುರ ಆಶ್ರಯ ಬಡಾವಣೆಯಲ್ಲಿ ಜಿ+2 ಮಾದರಿಯಲ್ಲಿ ನಿರ್ಮಿಸಿದ 652 ಮನೆಗಳನ್ನು ಮಂಗಳವಾರ ಫಲಾನುಭವಿಗಳಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ಯೋಜನೆ ಸಕಾಲದಲ್ಲಿ ಮುಕ್ತಾಯವಾಗದ ಕಾರಣ ನಿರ್ಮಾಣ ವೆಚ್ಚ ಹೆಚ್ಚಾಗಿದೆ. ಈ ಹೊರೆಯನ್ನು ಫಲಾನುಭವಿಗಳ ಮೇಲೆ ಹಾಕದೆ ಸರ್ಕಾರವೇ ಭರಿಸಲಿದೆ. ಈಗಾಗಲೇ ಪೂರ್ಣ ಹಣ ಪಾವತಿಸಿದವರಿಗೂ ಹೆಚ್ಚುವರಿ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದರು.

46 ಎಕರೆಯಲ್ಲಿ 261 ಕೋಟಿ ರೂ. ವೆಚ್ಚದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಜಿ+2 ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಮೂರು ಸಾವಿರ ಮನೆಗಳ ಪೈಕಿ ಎರಡನೇ ಹಂತದಲ್ಲಿ 652 ಮನೆಗಳನ್ನು ಹಸ್ತಾಂತರಿಸಲಾಗುತ್ತಿದೆ. ಉಳಿದ ಮನೆಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಕೊಳಚೆ ಪ್ರದೇಶ ನಿರ್ಮೂಲನೆ ಯೋಜನೆಯಡಿ 2,725 ಮನೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ದೊರೆತಿದ್ದು ಮಾರ್ಚ್ ಅಂತ್ಯದಲ್ಲಿ 1,545 ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಬಸವ, ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸರ್ಕಾರ ನಿಗದಿಪಡಿಸಿದ್ದ ಸಹಾಯಧನವನ್ನು 1.20 ಲಕ್ಷ ರೂ.ಗಳಿಂದ 3.50 ಲಕ್ಷ ರೂ.ಗಳಿಗೆ ಹೆಚ್ಚಿಸಲು ಪ್ರಸಕ್ತ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯಾನಾಯ್ಕಾ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಡಿ.ಎಸ್.ಅರುಣ್, ನಿಗಮ-ಮಂಡಳಿಗಳ ಅಧ್ಯಕ್ಷರು, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಇದ್ದರು.