ಜಿಲ್ಲೆ

ಜನಿವಾರ ತೆಗೆಯಿಸಿ ನಂಬಿಕೆ ಮೇಲೆ ಪ್ರಹಾರ ಮಾಡಿದ ಸರ್ಕಾರ

ಹುಬ್ಬಳ್ಳಿ : ಸಿಇಟಿ ಪರೀಕ್ಷೆ ಬರೆಯಲು ಹೋದ ವಿದ್ಯಾಥಿರ್ಯ ಜನಿವಾರ ತೆಗೆಸಿರುವುದು ಜನರ ನಂಬಿಕೆ ಮೇಲೆ ಪ್ರಹಾರ ನಡೆಸಿದಂತೆ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಢಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಹೋಂ ಗಾರ್ಡ್​ನನ್ನು ಅಮಾನತ್ತು ಮಾಡಿ ಕೈ ತೊಳೆದುಕೊಂಡಿರುವುದು ಸರಿಯಲ್ಲ ಎಂದರು.

ಕೇವಲ ಬ್ರಾಹ್ಮಣರಷ್ಟೇ ಜನಿವಾರ ಹಾಕುವುದಿಲ್ಲ. ಇದೊಂದು ಧಾಮಿರ್ಕ ನಂಬಿಕೆಯಾಗಿದ್ದು, ಇದರ ಮೇಲೆ ಸರ್ಕಾರ ಪ್ರಹಾರ ನಡೆಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಶುರುವಾದ ಜಾತಿಗಣತಿ ವಿವಾದ, ಆಡಳಿತ ವೈಫಲ್ಯ ಮರೆಮಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಏನಾದರೊಂದು ವಿಷಯಾಂತರ ಮಾಡುತ್ತಲೇ ಇರುತ್ತದೆ ಎಂದು ಪ್ರಲ್ಹಾದ ಜೋಶಿ ಟೀಕಿಸಿದರು.

"ರೋಹಿತ್​ ವೇಮುಲಾ ಕಾಯ್ದೆ ಜಾರಿ" ಕುರಿತು ಪ್ರತಿಕ್ರಿಯಿಸಿದ ಜೋಶಿ, ಕಾಂಗ್ರೆಸ್​ ವಿವಾದ ಮೈಮೇಲೆ ಎಳೆದುಕೊಂಡಾಗ ಹೀಗೆ ಜನರ ಗಮನ ಬೇರೆಡೆ ಸೆಳೆಯುವುದು ಹೊಸದೇನಲ್ಲ ಎಂದು ಹೇಳಿದರು.

ಜಾತಿ ಗಣತಿ ಎಂದು ಯಾರ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿದ್ದಾರೆ ? ರಾಜ್ಯದಲ್ಲಿ ಒಬ್ಬರೇ ಒಬ್ಬರ ಮನೆಗೂ ಭೇಟಿ ನೀಡಿಲ್ಲ. ವಿವಾದ, ವಿರೋಧ ವ್ಯಕ್ತವಾಗುತ್ತಲೇ ಇದು ಜಾತಿ ಗಣತಿಯಲ್ಲ ಆಥಿರ್ಕ ಸಮೀಕ್ಷೆಯೆಂದರು. ಇದೆಂಥ ಹುಡುಗಾಟ ಎಂದು ಸಚಿವ ಜೋಶಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ರಾಹುಲ್​ ಗಾಂಧಿ ಸೇರಿದಂತೆ ಕಾಂಗ್ರೆಸ್​ ನಾಯಕರಿಗೆ ದೇಶದ ಬಗ್ಗೆ ನೈಜ ಕಾಳಜಿ ಇಲ್ಲ. ರಾಷ್ಟ್ರದ ಸಮಗ್ರತೆ, ನಾಗರಿಕರ ಕ್ಷೇಮ ಯಾವುದರ ಬಗ್ಗೆಯೂ ಒಂದು ಪ್ರಾಮಾಣಿಕ ಮತ್ತು ಪಾರದರ್ಶಕ ನಿಲುವುಗಳಿಲ್ಲ. ಕೇವಲ ವೋಟ್​ ಬ್ಯಾಂಕ್​ ರಾಜಕಾರಣ ಮಾಡುತ್ತಾರಷ್ಟೇ ಎಂದು ಆರೋಪಿಸಿದರು.

ರಾಹುಲ್​ ಗಾಂಧಿ ದೇಶದೊಳಿತಿಗೆ ರಾಜಕೀಯ ಮಾಡುತ್ತಿಲ್ಲ. ಅವರು ಎಲ್ಲ ಸಮಯವನ್ನು ವೋಟ್​ ಬ್ಯಾಂಕ್​ ರಾಜಕೀಯದ ಮೇಲೆ ಮಾತ್ರ ಗಮನಹರಿಸಿದ್ದಾರೆ. ರಾಜ್ಯದಲ್ಲಿ ರೋಹಿತ್​ ವೇಮುಲಾ ಕಾಯ್ದೆ ಜಾರಿಗೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದೂ ಇದರ ಒಂದು ಭಾಗ ಎಂದು ಸಚಿವ ಟೀಕಿಸಿದರು.