ಜಿಲ್ಲೆ

ಆರಕ್ಷಕರ ಸೇವಾ ಭದ್ರತೆಗೆ ಸರ್ಕಾರ ಗಮನ ನೀಡಲಿ

ಹಾಸನ: ಒಂದು ವರ್ಷದಲ್ಲಿ ದೇಶದಾದ್ಯಂತ 191 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಅವರ ಕುಟುಂಬಗಳು ಅನುಭವಿಸುತ್ತಿರುವ ನೋವು ಅಳತೆಗೆ ಮೀರಿದ್ದು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಹೇಮಾವತಿ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸೇವೆ ಸಲ್ಲಿಸುವಾಗ ಹುತಾತ್ಮರಾದ ಪೊಲೀಸರ ಸ್ಮರಣಾರ್ಥವಾಗಿ ಪ್ರತಿ ವರ್ಷ ಅ.21ರಂದು ಈ ದಿನ ಆಚರಿಸಲಾಗುತ್ತದೆ ಎಂದರು.

ಪೊಲೀಸರು ನಮ್ಮನ್ನು ಕಾಪಾಡುವವರು. ಆದರೆ ಅವರ ಭದ್ರತೆಯ ಬಗ್ಗೆ ಹಲವು ಪ್ರಶ್ನೆ ಎದುರಾಗುತ್ತದೆ. ಅವರು 24 ಗಂಟೆ ಕರ್ತವ್ಯದಲ್ಲಿರುತ್ತಾರೆ. ಅವರ ಸೇವಾ ಭದ್ರತೆಗೂ ಸರ್ಕಾರ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾತನಾಡಿ, ಪೊಲೀಸರ ಸೇವೆ ಸಮಾಜದ ಜೀವನಾಡಿಯಾಗಿದ್ದು, ಅವರು ಸದಾ ದೃಢತೆ ಕಾಪಾಡಿಕೊಂಡು ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು. ನಾವುಗಳು ಅವರ ಸೇವೆಗೆ ಯಾವಾಗಲೂ ಕೃತಜ್ಞರಾಗಿರಬೇಕು ಎಂದು ಹೇಳಿದರು.

ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರ ಸೇವೆ ಇಲ್ಲದಿದ್ದರೆ ಸಮಾಜವೇ ಅಸ್ಥಿರವಾಗುತ್ತದೆ ಎಂದರು.

ಪೊಲೀಸರು ನಮ್ಮ ರಕ್ಷಕರಾಗಿದ್ದು, ಅವರು ಮಾಡುವ ಸೇವೆ ಅಮೂಲ್ಯವಾದುದು, ಯಾವ ಸಂದರ್ಭದಲ್ಲಿಯೂ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾನಸಿಕವಾಗಿ ಅಥವಾ ದೈಹಿಕವಾಗಿ ಕುಗ್ಗಬಾರದು, ತಮ್ಮ ಕರ್ತವ್ಯದಲ್ಲಿ ಪೊಲೀಸರು ತಮ್ಮ ವೈಯಕ್ತಿಕ ಜೀವನವನ್ನೇ ತ್ಯಾಗ ಮಾಡುತ್ತಾರೆ. ಅವರು ಕ್ಷಣಮಾತ್ರ ಸುಮ್ಮನಾದರೆ ಸಮಾಜವೇ ಅಸ್ಥಿರವಾಗುತ್ತದೆ ಎಂದು ಹೇಳಿದರು.

ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಮೊಹಮ್ಮದ್ ಸುಜೀತಾ ಮಾತನಾಡಿ, ಕರ್ತವ್ಯ ನಿಷ್ಠೆಯಿಂದ ಪ್ರಾಣತ್ಯಾಗ ಮಾಡಿದ ಹುತಾತ್ಮರಿಗೆ ಪ್ರತಿ ವರ್ಷ ಈ ದಿನ ಗೌರವ ಸಲ್ಲಿಸಲಾಗುತ್ತದೆ. ಇದು ಅವರ ತ್ಯಾಗಕ್ಕೆ ನಮನಗಳು ಎಂದು ಹೇಳಿದರು.

ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಅತಿಥಿಗಳಿಗೆ ಪೊಲೀಸ್ ಇಲಾಖೆ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು. ನಂತರ ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಗೌರವ ಸೂಚಿಸಿದರು. ಮೂರು ಬಾರಿ ಗುಂಡು ಹಾರಿಸಿ, ಹುತಾತ್ಮರ ಪಟ್ಟಿ ಓದಿದ ಬಳಿಕ ಪೊಲೀಸ್ ಧ್ವಜವನ್ನು ಅರ್ಧಕ್ಕೆ ಇಳಿಸಿ ಮೌನಾಚರಣೆ ನಡೆಸಲಾಯಿತು.

ಪೊಲೀಸ್ ಹೆಚ್ಚುವರಿ ಅಧೀಕ್ಷಕ ವೆಂಕಟೇಶ್ ನಾಯ್ಡು, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಇದ್ದರು.