ಎಂ ಎನ್ ಕೋಟೆ: ಹಿಂದಿನ ಶಿಕ್ಷಣ ವ್ಯವಸ್ಥೆ ಬಹಳ ಉತ್ತಮವಾಗಿತ್ತು. ಇಂದಿನ ಸರ್ಕಾರಕ್ಕೆ ಈ ಬಗ್ಗೆ ತಾತ್ಸರ ಮನೋಭಾವನೆ ಬಂದಿದೆ. ಈ ಪದ್ಧತಿ ಹೀಗೆ ಮುಂದುವರಿದರೆ, ಮುಂದಿನ ಯುವ ಪೀಳಿಗೆಗೆ ಕಷ್ಟದ ಪರಿಸ್ಥಿತಿ ಎದುರಾಗುತ್ತದೆ ಎಂದು ಬೆಟ್ಟದಹಳ್ಳಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿ ಶ್ರೀ ಮಲ್ಲಿಕಾರ್ಜುನಸ್ವಾಮಿ ಸನಿವಾಸ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು ಸೋಮವಾರ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ನಂತರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಕಣ್ಮೆರೆಯಾಗುತ್ತಿವೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸರ್ಕಾರ ಹೊಸ ಯೋಜನೆಗಳನ್ನು ರೂಪಿಸಿ ಗ್ರಾಮೀಣ ಭಾಗದಲ್ಲಿ ಇರುವ ಶಾಲೆಗಳನ್ನು ಉಳಿಸಬೇಕು. ಹಳೇ ವಿದ್ಯಾರ್ಥಿಗಳು ಹಾಗೂ ದಾನಿಗಳು ಹೆಚ್ಚು ಸಹಕಾರ ನೀಡಿದಾಗ ಮಾತ್ರ ಮಠಮಾನ್ಯಗಳು ಉಳಿಯಲು ಸಾಧ್ಯವಾಗುತ್ತದೆ. ಹಳೇ ವಿದ್ಯಾರ್ಥಿಗಳು ತಾವು ಓದಿದ ಶಾಲೆಯನ್ನು ನೆನಪುಮಾಡಿಕೊಂಡು ಶಾಲೆಗಳಿಗೆ ಹಾಗೂ ಗುರುಗಳಿಗೆ ಗುರುವಂಧನಾ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ. ಹಳೆಯ ವಿದ್ಯಾರ್ಥಿಗಳ ಸಹಕಾರ ನಮ್ಮ ಶಾಲೆ ಹಾಗೂ ಮಠದ ಮೇಲೆ ಸಂಪೂರ್ಣ ಇರಲಿ ಎಂದು ಆಶಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಗವಿಮಠದ ಶಾಲೆಗಳಿಗೆ ಬೇಂಚ್, ಚೇರ್ ಹಾಗೂ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಹಾಗೆಯೇ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಖಜಾಂಚಿ ನಂಜುಂಡಪ್ಪ, ಮುಖ್ಯಶಿಕ್ಷಕ ಸೋಮಶೇಖರ್, ನಿವೃತ್ತ ಶಿಕ್ಷಕರಾದ ರಂಗಪ್ಪ, ಸಿದ್ದರಾಮಯ್ಯ, ಕ್ಷೇತ್ರಪಾಲಪ್ಪ ಇದ್ದರು.