ಯಾದಗಿರಿ: ಶಹಾಪುರ ಕ್ಷೇತ್ರದಲ್ಲಿ ಈ ಬಾರಿ ಅತೀಹೆಚ್ಚು ಮಳೆಯಾಗಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಕಳೆದ ಒಂದು ವರ್ಷದಿಂದ ನಯಾ ಪೈಸೆ ಬಿಡುಗಡೆಯಾಗಿಲ್ಲ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಗುಡುಗಿದರು.
ಯಾದಗಿರಿಯ ಜಿಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಪ್ರವಾಹ ಪರಿಸ್ಥಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಂಡಾಮಂಡಲಾರದ ಶಾಸಕ ದರ್ಶನಾಪುರ, ಕ್ಷೇತ್ರದ ಜನತೆಗೆ ರಾಜ್ಯ ಸರ್ಕಾರ ವಿಷ ಉಣಿಸುವ ಕೆಲಸ ಮಾಡುತ್ತಿದೆ. ನಾವು ಅನುದಾನ ಕೇಳುತ್ತಿದ್ದೇವೆ. ಭಿಕ್ಷೆ ಅಲ್ಲ. ನಿಮಗೆ ನನ್ನ ಕ್ಷೇತ್ರಕ್ಕೆ ಹಣ ಕೊಡಲಾಗದಿದ್ದರೆ, ಶಹಾಪುರವನ್ನು ಕರ್ನಾಟಕದ ಭೂಪಟದಿಂದ ತೆಗೆದು ಹಾಕಿ ಎಂದು ಕಿಡಿಕಾರಿದರು.
ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಗೆ ಕರ್ನಾಟಕ10.50 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ. ಆದರೆ ಶಹಾಪುರ ಕ್ಷೇತ್ರಕ್ಕೆ ಒಂದು ಪೈಸೆ ನೀಡಿಲ್ಲ. ಕಾಂಗ್ರೆಸ್, ಜೆಡಿಎಸ್ ಶಾಸಕರ ಕ್ಷೇತ್ರಗಳ ಬಗ್ಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಮತ ನೀಡಿದ ಜನತೆ ನನಗೆ ಉಗಿಯುತ್ತಿದ್ದಾರೆ. ನಾವು ಏನನ್ನು ಹೇಳಲು ಆಗುತ್ತಿಲ್ಲ. ನೀವೇ ಉತ್ತರಿಸಿ ಎಂದು ಹಠ ಹಿಡಿದರು. ಈ ಸಂದರ್ಭದಲ್ಲಿ ಶಾಸಕರನ್ನು ಸಮಾಧಾನ ಮಾಡಲು ಯತ್ನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ನಿಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಲು ಪ್ರಯತ್ನಿಸುತ್ತೇನೆ ಎಂದರು.
ಈ ಮಾತಿಗೆ ಒಪ್ಪದ ಶಾಸಕರು, ಪ್ರಯತ್ನ ಮಾಡುತ್ತೇನೆ ಎಂದು ಹೇಳಬೇಡಿ, ಮಾಡಿಸಿ ಕೊಡುತ್ತೇನೆ ಎಂದು ಮಾತು ಕೊಡಿ ಎಂದು ಹಠ ಹಿಡಿದರು. ಶಾಸಕರ ಆಕ್ರೋಶ ಕಂಡು ಒಂದು ಕ್ಷಣ ಸಭೆ ಮೌನಕ್ಕೆ ಜಾರಿತು.