ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ಕಾಂಗ್ರೆಸ್ ಚುನಾವಣೆಗೆ ಮುನ್ನ ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿ ಜನತೆಯ ಆಶೋತ್ತರಕ್ಕೆ ಸ್ಪಂದಿಸುವ ಮೂಲಕ ನುಡಿದಂತೆ ನಡೆದ ಏಕೈಕ ಸರ್ಕಾರ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ಉನ್ನತ ಶಿಕ್ಷಣ ಸಚಿವರ ಡಾ.ಎಂ.ಸಿ.ಸುಧಾಕರ್ ಹೇಳಿದರು.
ತಾಲೂಕಿನ ಕಸಬಾ ಹೋಬಳಿಯ ಹಂದಿ ಜೋಗಿ ಗಡ್ಡೆ, ಕಾಚಹಳ್ಳಿ, ಆನೂರು ಗ್ರಾಮದಲ್ಲಿ ಭಾನುವಾರ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ 1.86 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿ, ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಮನೆ ಮನೆಗೆ ನೀರು ಕೊಡುವ ಕಾಮಗಾರಿಗೆ 3 ಹಳ್ಳಿಗಳಲ್ಲಿ ಚಾಲನೆ ನೀಡಿದ್ದು, ಈ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರು ಯಾರು ಭಾಗವಹಿಸುತ್ತಿಲ್ಲ. ಭಾಗವಹಿಸದೆ ಇರುವ ಬಗ್ಗೆ ಗುತ್ತಿಗೆದಾರರೊಂದಿಗೆ ಸಭೆ ನಡೆಸಿದ ನಂತರ ಅಧಿಕಾರಿಗಳ ಜತೆ ಚರ್ಚಿಸಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದರು.
ಊಲವಾಡಿ ಗ್ರಾಪಂ ಅಧ್ಯಕ್ಷೆ ರತ್ನಮ ನರಸಿಂಹಪ್ಪ, ಉಪಾಧ್ಯಕ್ಷೆ ಸವಿತಾ ಮುರಳಿ. ಮುನಗನಹಳ್ಳಿ ಗ್ರಾಪಂ ಅಧ್ಯಕ್ಷೆ ಶಂಶೀಯ ತಾಜ್, ಉಪಾಧ್ಯಕ್ಷ ವೆಂಕಟರಾಮರೆಡ್ಡಿ, ಆನೂರು ಗ್ರಾಪಂ ಅಧ್ಯಕ್ಷೆ ಸುಮಿತ್ರಮ್ಮ ವೆಂಕಟೇಶ್, ಕುರುಬೂರು ಗ್ರಾಪಂ ಅಧ್ಯಕ್ಷ ನರೇಂದ್ರ, ಗ್ರಾಪಂ ಸದಸ್ಯರಾದ ರಘು. ತಾಜ್ ಷಾ, ಮಾಜಿ ಅಧ್ಯಕ್ಷೆ ವೆಂಕಟರತ್ನಮ್ಮ ಶ್ರೀನಿವಾಸ್, ಪಠಾನ್ ಖಾನ್, ದಾವುದ್ ಪಾಷಾ, ಇಸ್ಮಾಯಿಲ್, ವೀರಪ್ಪ, ನಾರಾಯಣಪ್ಪ, ಶಿವ, ಗುತ್ತಿಗೆದಾರರಾದ ಗೋಪಾಲಕೃಷ್ಣ, ಶ್ರೀರಾಮರೆಡ್ಡಿ, ಡಿ.ವಿ.ಶ್ರೀನಿವಾಸ್, ಅಶ್ವತ್ಥ ನಾರಾಯಣ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾಬಾ ನಾಗರಾಜ್ ಇದ್ದರು.
ಬಿಜೆಪಿಗರ ಹೇಳಿಕೆ ಅಲ್ಲಗಳೆದ ಸಚಿವ:
ಮತದಾರರಿಗೆ ಕೊಟ್ಟ ಮಾತಿನಂತೆ ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದೇವೆ. 5 ಕೆಜಿ ಅಕ್ಕಿ ಹಾಗೂ ಹೆಚ್ಚುವರಿ ಅಕ್ಕಿ ಸಿಗುವವರೆಗೂ ಅದಕ್ಕೆ ಪ್ರತಿಯಾಗಿ ಹಣ ನೀಡುತಿದ್ದೇವೆ. ಗೃಹ ಜ್ಯೋತಿ ಜಾರಿ ಮಾಡಿದ್ದು, ಇದೀಗ ಗೃಹಲಕ್ಷಿ$್ಮ ಯೋಜನೆಯನ್ನು ಜಾರಿಗೊಳಿಸಲು ಸಿದ್ಧವಾಗುತ್ತಿರುವುದು ಬಿಜೆಪಿಗರಿಗೆ ಸಹಿಸಲಾಗುತ್ತಿಲ್ಲ. ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಬಿಜೆಪಿಗರು, ಅವರ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಕಡಿಮೆ ಮಾಡುತ್ತೇವೆ ಎಂದು ಹೇಳಿಕೆ ನೀಡಿ, ಬಡಜನರ ಜತೆ ಚೆಲ್ಲಾಟವಾಡುತ್ತಿದ್ದಾರೆ ಹೊರತು ಬೆಲೆ ಕಡಿಮೆ ಮಾಡಿಲ್ಲ ಎಂದು ಕಿಚಾಯಿಸಿದರು. ಬಿಬಿಎಂಪಿ ಕಚೇರಿಗೆ ಬೆಂಕಿ ಇಟ್ಟು ದಾಖಲೆಗಳನ್ನು ಕಾಂಗ್ರೆಸ್ ಪಕ್ಷದವರು ನಾಶ ಮಾಡಿದ್ದಾರೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಎಂ.ಸಿ.ಸುಧಾಕರ್, 2012ರಲ್ಲಿ ಬಿಬಿಎಂಪಿ ಕಚೇರಿಗೆ ಬೆಂಕಿ ಹಾಕಿದ್ದು ಯಾರು? ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ಸಿಗರ ಮೇಲೆ ಬಿಜೆಪಿ ಆರೋಪ ಮಾಡುತ್ತಿದೆ ಎಂದರು.