ಜಿಲ್ಲೆ

ತೀವ್ರ ಬರಗಾಲವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ, ಇದೀಗ ವ್ಯಾಪಕ ಮಳೆಯಿಂದ ಬೆಳೆ ಹಾನಿಯಾಗುತಿದ್ದರೂ ಪರಿಶೀಲನೆ ಮಾಡಲು ಸಚಿವರು ಮುಂದಾಗುತ್ತಿಲ್ಲ

ಮೈಸೂರು: ನಮ್ಮ ರೈತರು ತೀವ್ರ ಬರಗಾಲದಿಂದ ತತ್ತರಿಸಿ ಅತ್ಮಹತ್ಯೆಗೆ ಶರಣಾದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಇದೀಗ ವ್ಯಾಪಕ ಮಳೆಯಿಂದ ಬೆಳೆ ಹಾನಿಯಾಗುತಿದ್ದರೂ ಪರಿಶೀಲನೆ ಮಾಡಲು ಸಚಿವರು ಮುಂದಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಹಲವೆಡೆ ಬೆಳೆಗಳು ನಷ್ಟವಾಗಿದೆ. ಮೈಸೂರು, ವಿಜಯಪುರ, ಧಾರವಾಡ, ತುಮಕೂರು, ಚಿತ್ರದುರ್ಗ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಬೆಳೆ ಹಾನಿಯಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪಿರಿಯಾಪಟ್ಟಣ ತಾಲೂಕಿನಲ್ಲಿ ತಂಬಾಕು, ಶುಂಠಿ ಬೆಳೆಗಳು, ಪಾವಗಡ ತಾಲೂಕಿನಲ್ಲಿ ಅಡಿಕೆ ಮರಗಳು ನೆಲಕ್ಕೆ ಉರುಳಿರುವ ಕಾರಣ ತುಂಬಾ ನಷ್ಟವಾಗಿದೆ. ಮೈಸೂರು ನಗರದಲ್ಲಿ ಮಳೆ ನೀರು ನುಗ್ಗಿ ಜನರು ಪರದಾಡಿದ್ದಾರೆ. ಮಳೆ ಅನಾಹುತದಿಂದ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ರೈತರು, ಜನಸಾವಾನ್ಯರು ಕಷ್ಟ ಅನುಭವಿಸುತ್ತಿದ್ದರೂ ರಾಜ್ಯಸರ್ಕಾರ ಹೇಳಿಕೆಗೆ ಸೀಮಿತವಾಗಿದೆ ಹೊರೆತು ಮುಖ್ಯಮಂತ್ರಿ ಸೇರಿದಂತೆ ಯಾವುದೇ ಸಚಿವರು ಸ್ಪಂದಿಸಿಲ್ಲ ಎಂದು ದೂರಿದರು.

ಸರ್ಕಾರಕ್ಕೆ ಸ್ವಲ್ಪನೂ ಕಾಳಜಿ ಇಲ್ಲ: ಬ್ಯಾಂಕ್ ಸಾಲ ತೀರಿಸಲಾಗದೆ ಮತ್ತು ಅಧಿಕಾರಿಗಳ ಒತ್ತಡ ತಾಳದೆ ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಡೆದಿದೆ. ಮುಖ್ಯಮಂತ್ರಿ ಅಥವಾ ಸಚಿವರು ರೈತರ ವಿಚಾರದಲ್ಲಿ ಅಧಿಕಾರಿಗಳು ತೊಂದರೆ ಕೊಡಬಾರದೆಂದು ಕನಿಷ್ಠ ಸೌಜನ್ಯಕ್ಕಾದರೂ ಸೂಚನೆ, ಎಚ್ಚರಿಕೆ ನೀಡಬಹುದಾಗಿತ್ತು. ಆದರೆ, ಈ ಸರ್ಕಾರಕ್ಕೆ ಸ್ವಲ್ಪನೂ ಕಾಳಜಿ ಇಲ್ಲ ಎಂದು ಕಿಡಿಕಾರಿದರು. ಮೊದಲ ವರ್ಷದ ಸಾಧನೆ ಬಗ್ಗೆ ಮಾತನಾಡಿರುವ ಸಿಎಂ ಗ್ಯಾರಂಟಿ ಯೋಜನೆಗಳ ಬಿಟ್ಟರೆ ಬೇರೇನೂ ಅಭಿವೃದ್ಧಿ ಯೋಜನೆ ಕುರಿತು ಹೇಳಲಾಗಿಲ್ಲ.ನೀರಾವರಿ,ಗ್ರಾಮೀಣಾಭಿವೃದ್ಧಿ, ಬಗ್ಗೆ ಮಾತನಾಡಿಲ್ಲ. ಗ್ಯಾರಂಟಿಗೆ ಒತ್ತು ನೀಡಿ ಅಭಿವೃದ್ಧಿ ಶೂನ್ಯ ಮಾಡಿದ್ದಾರೆ ಎಂದು ಆರೋಪಿಸಿದರು.

ಜಾತಿ ಗಣತಿ ವರದಿಯನ್ನು ಜಾರಿಗೊಳಿಸಲು ಸಂಪುಟ ಉಪ ಸಮಿತಿ ರಚನೆ ಮಾಡುವುದಾಗಿ ಹೇಳಿರುವ ಸಿಎಂ, ಕಾಂತರಾಜ್ ಆಯೋಗ ನೀಡಿದ ವರದಿಯು ಪಾರದರ್ಶಕವಾಗಿ ಇದ್ದರೆ ಜಾರಿಗೊಳಿಸಲಿ ಎಂದು ಸವಾಲು ಹಾಕಿದರು. ರಾಜಕೀಯಮತ್ತು ಆಡಳಿತದಲ್ಲಿ ಅನುಭವ ಇರುವ ಮುಖ್ಯಮಂತ್ರಿಗಳಿಗೆ ಈ ವಿಚಾರ ಗೊತ್ತಿದೆ. ಆದರೆ ಉಪ ಸಮಿತಿ ರಚನೆ ಮಾಡಿ ಕಾಲಾಹರಣ ಮಾಡುವ ಉದ್ದೇಶವಿದೆ ಎಂದು ಹೇಳಿದರು. ಕೇಂದ್ರ ಸರ್ಕಾರದ ವಿರುದ್ಧ ಸಣ್ಣ ಸಣ್ಣ ವಿಚಾರಗಳನ್ನು ದೊಡ್ಡದು ಮಾಡಿ ಸಂಘರ್ಷ ಮಾಡುವುದು ಬಿಟ್ಟರೆ ಬೇರೆನೂ ವಾಡುತ್ತಿಲ್ಲ ಎಂದು ತಿಳಿಸಿದರು.