ಮೈಸೂರು: ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಲು ರಾಜ್ಯ ಸರ್ಕಾರ ವಿಫಲವಾ ಗಿರುವ ಹಿನ್ನೆಲೆಯಲ್ಲಿ ಕಾವೇರಿ ಸಮಸ್ಯೆ ಎದುರಾಗಿದೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ತಮಿಳುನಾಡನ್ನು ಓಲೈಸಿ ಕೊಳ್ಳಲು ಮುಂದಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಕಾವೇರಿ ಕೊಳ್ಳದ ಜಲಾಶಯಗಳು ಹಾಗೂ ಮಳೆ, ಬೆಳೆಯ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕಿಸಿಲ್ಲ. ಈ ಕಾರಣಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಸರಿಯಾದ ಮಾಹಿತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಪ್ರಾಧಿಕಾರಕ್ಕೆ ಸೂಕ್ತ ಮಾಹಿತಿ ನೀಡಿ ರಾಜ್ಯದ ಜನರಿಗೆ ನ್ಯಾಯ ಕೊಡಿಸುವ ಬದಲು ಪ್ರಧಾನಿಯನ್ನು ದೂರುವ ಕೆಲಸ ಮಾಡುತ್ತಿದೆ. ನರೇಂದ್ರ ಮೋದಿ ಕೇವಲ ತಮಿಳುನಾಡು, ಕರ್ನಾಟಕಕ್ಕೆ ಮಾತ್ರ ಪ್ರಧಾನಿಯಲ್ಲ. ಅವರ ಮುಂದೆ ಹಲವಾರು ನದಿ ನೀರಿನ ವಿವಾದಗಳು ಇವೆ. ಎರಡು ರಾಜ್ಯಗಳ ನಡುವೆ ವಿವಾದ ಏರ್ಪಟ್ಟ ಸಂದರ್ಭ ನೇರವಾಗಿ ಪ್ರಧಾನಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಕರ್ನಾಟಕ ಹಾಗೂ ತಮಿಳುನಾಡಿನ ವಾಸ್ತವ ಪರಿಸ್ಥಿತಿ ಅವಲೋಕಿಸಲು ತಂಡ ಕಳುಹಿಸಬೇಕು ಎಂದು ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ತಂಡವನ್ನು ಕಳುಹಿಸಲಿದ್ದು, ಅಲ್ಲಿಯವರೆಗೆ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಒಮ್ಮೆ ನೀರು ಹರಿಸಿದರೆ ಮತ್ತೆ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ. ಹಾಗಾಗಿ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕಾವೇರಿ ನದಿ ನೀರು ಹಂಚಿಕೆಯಲ್ಲಿ ಪ್ರತಿ ಬಾರಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಕಳೆದ ಬಾರಿ ಉತ್ತಮ ಮಳೆಯಾಗಿ 600 ಟಿಎಂಸಿ ನೀರು ತಮಿಳುನಾಡಿಗೆ ಹರಿದಿದೆ. ತಮಿಳುನಾಡು 400 ಟಿಎಂ ನೀರನ್ನು ಡ್ಯಾಂನಲ್ಲಿ ಸಂಗ್ರಹಿಸಿ ಉಳಿದ 200 ಟಿಎಂಸಿ ನೀರನ್ನು ಸಮುದ್ರಕ್ಕೆ ಹರಿಸಿತ್ತು. ಪ್ರಸಕ್ತ ವರ್ಷದ ಆರಂಭದಲ್ಲಿ ತಮಿಳುನಾಡಿನ ಬಳಿ 111 ಟಿಎಂಸಿ ನೀರು ಬಫರ್‌ಸ್ಟಾಕ್‌ನಲ್ಲಿ ಇತ್ತು. ಪ್ರತಿ ವರ್ಷದಂತೆ ಅವರಿಗೆ ಈ ಬಾರಿ 108 ಟಿಎಂ ನೀರು ಹರಿಸಬೇಕಾಗಿತ್ತು. ಆದರೆ, ರಾಜ್ಯದಲ್ಲಿ ಮಳೆಯ ಕೊರತೆಯಿಂದ ಜಲಾಶಯಗಳು ಭರ್ತಿಯಾಗದೆ ಹಿನ್ನೆಲೆಯಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಹರಿಸಲು ಸಾಧ್ಯವಾಗಿಲ್ಲ ಎಂದರು.