ಮೈಸೂರು: ಸರ್ಕಾರಿ ನೌಕರರಿಗೂ ಸಂಬಳ ಕೊಡಲೂ ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಅಂತಹ ಸ್ಥಿತಿ ಬಂದಿದೆ. ಹಾಗಾಗಿಯೇ ದೇವಾಲಯಗಳ ಹುಂಡಿಯಲ್ಲಿನ ಶೇ.10ರಷ್ಟು ಹಣವನ್ನು ಸರ್ಕಾರ ಬಳಕೆ ಮಾಡಿಕೊಳ್ಳಲು ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ನಗರದ ಜಯಲಕ್ಷ್ಮೀಪುರಂನಲ್ಲಿರುವ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಮನೆಗೆ ಗುರುವಾರ ಬೆಳಗ್ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ದೇವಾಲಯಗಳ ಹುಂಡಿಗೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಒಂದು ಹುಂಡಿ ಇಟ್ಟರೆ, ದಾನಿಗಳು ಅಲ್ಲಿಗೆ ಬಂದು ದಾನ ಮಾಡುತ್ತಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಸರ್ಕಾರ ರಾಜ್ಯದಲ್ಲಿರುವ 224 ವಿಧಾನಸಭಾ ಕ್ಷೇತ್ರಕ್ಕೆ ಒಂದೇ ಒಂದು ರೂಪಾಯಿ ಅನುದಾನ ಕೊಡುತ್ತಿಲ್ಲ. ರಾಜ್ಯದ ಹಣೆಬರಹ ಏನಾಗುತ್ತಿದೆ ಎಂಬುದನ್ನು ಜನರೇ ನೋಡುತ್ತಿದ್ದಾರೆ ಎಂದು ಜರಿದರು.
ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರದ ಅಜೆಂಡಾ ಏನೆಂಬುದು ಈ ಆದೇಶಗಳಿಂದ ಗೊತ್ತಾಗುತ್ತಿದೆ. ಜತೆಗೆ ಈ ಸರ್ಕಾರ ಕನ್ನಡ ವಿರೋಧಿ ಚಿಂತನೆಯಲ್ಲಿದೆ. ಕನ್ನಡ ನಾಡು-ನುಡಿಗೆ ಮುಖ್ಯಮಂತ್ರಿ ಧಕ್ಕೆ ತರುತ್ತಿದ್ದಾರೆ ಎಂದು ದೂರಿದರು.