ಜಿಲ್ಲೆ

ವೇದಗಳಲ್ಲಿದೆ ಸಕಲ ಜೀವಿಗಳ ಒಳಿತು

ಗೋಕರ್ಣ: ಆಧುನಿಕ ಸಾಮಾಜಿಕ ವ್ಯವಸ್ಥೆ ಮನುಷ್ಯರ ಕಲ್ಯಾಣ, ಅಭಿವೃದ್ಧಿಯನ್ನು ಮಾತ್ರ ಪರಿಗಣಿಸುತ್ತದೆ.

ಆದರೆ, ನಮ್ಮ ಸನಾತನವಾದ ವೇದ-ಪರಂಪರೆಗಳು ಮನುಷ್ಯರ ಜತೆಗೆ ಪಶು-ಪಕ್ಷಿ, ಮೃಗ-ಕೀಟಗಳು, ಮರ-ಗಿಡಗಳು ಸೇರಿದಂತೆ ಸೃಷ್ಟಿಯಲ್ಲಿರುವ ಸಕಲ ಜೀವಿಗಳ ಒಳಿತನ್ನು ಹಾರೈಸುತ್ತವೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಇಲ್ಲಿನ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿನ ಸಂಘಟನಾ ಚಾತುರ್ವಸ್ಯದಲ್ಲಿ ಶ್ರೀಗಳು ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಆಶೀರ್ವದಿಸಿದರು.

‘ಶನ್ನೋ ಅಸ್ತು ದ್ವಿಪದೇ, ಶಂ ಚತುಷ್ಪದೇ’ ಎಂದರೆ ಎರಡು ಪಾದವುಳ್ಳವರಿಗೆ ಮತ್ತು ಚತುಷ್ಪಾದದವರಿಗೆಲ್ಲ ಶುಭವಾಗಲಿ ಎಂದು ವೇದಗಳು ವಿಶ್ವ ವೈಶಾಲ್ಯವನ್ನು ಸಾರಿವೆ.

ಎಲ್ಲವೂ, ಎಲ್ಲರೂ ಒಟ್ಟಾಗಿ ಜತೆಜತೆಯಾಗಿ ಸಮಷ್ಟಿಯಲ್ಲಿ ನಾವು ಬೆಳೆಯಬೇಕು. ಒಂಟಿಯಾಗಿ ಬಾಳಿದರೆ ಜಗದ ಜತೆಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ. ಇಂತಹ ಸಂಘ ಜೀವನದಿಂದ ಮಾತ್ರ ಬದುಕು ಪರಿಪೂರ್ಣವಾಗುತ್ತದೆ.

ವಿಶ್ವದ ವಿಕಾಸಕ್ಕೆ ಕಾರಣವಾಗುತ್ತದೆ. ಎನ್ನುವುದನ್ನು ವೇದಗಳು ತಿಳಿಸಿವೆ. ಸನಾತನ ಪರಂಪರೆ ಬೆಳೆದು, ಅರಳಿ, ವಿಕಸಿಸಿರುವುದೇ ಇಂಥ ಸಮಷ್ಟಿಯಲ್ಲಿ. ಅರಮನೆಯಲ್ಲಿ ರಾಜ ಮಾತ್ರ ಅಥವಾ ಅವನ ಪರಿವಾರವಷ್ಟೇ ವಾಸಿಸುತ್ತಿರಲಿಲ್ಲ. ಆತನೊಡನೆ ಸರ್ವ ಜೀವಿಗಳು, ವಿವಿಧ ವಿಧದ ವೃಕ್ಷ, ಸಸ್ಯ ಹಾಗೂ ಪ್ರಾಣಿ ಸಂಕುಲಗಳಿರುತ್ತಿದ್ದವು.

ಶ್ರೀರಾಮ ಮಾತ್ರ ವನವಾಸಕ್ಕೆ ತೆರಳಲಿಲ್ಲ. ಆತನ ಸಂಗಡ ಗಜ-ಅಶ್ವಾದಿಗಳೂ ಇದ್ದವು ಎನ್ನುವುದು ಶ್ರೀರಾಮಚಂದ್ರನ ಹೃದಯ ವೈಶಾಲ್ಯವನ್ನು ಮಾತ್ರವಲ್ಲದೆ, ಪಶುಪ್ರೀತಿಗೆ ನಿದರ್ಶನವಾಗಿದೆ ಎಂದು ರಾಮಾಯಣದಲ್ಲಿ ನಾನಾ ಬಗೆಯ ಉದಾಹರಣೆಗಳಿಂದ ಸೃಷ್ಟಿ ಮೇಲಿನ ಪ್ರೇಮವನ್ನು ಶ್ರೀಗಳು ವಿಶ್ಲೇಷಿಸಿದರು.

ಆದರೆ, ಇಂದಿನ ಆಧುನಿಕ ಸಮಾಜದಲ್ಲಿ ಪಶು-ಪಕ್ಷಿ ಮತ್ತು ಇತರ ಪ್ರಾಣಿ ಸಂಕುಲದ ಬಗ್ಗೆ ಕೂಗು ಇದೆ. ಆದರೆ, ನಿಜವಾದ ಕಾಳಜಿ ಇಲ್ಲ. ಇಂದಿನ ನಗರ ಜೀವನದಲ್ಲಿ ಗಿಡ-ಮರಗಳು, ಪಶು-ಪಕ್ಷಿಗಳು, ಜಲ ಬೆಟ್ಟಗಳು ಯಾವವೂ ಇಲ್ಲ. ಬದಲಾಗಿ ಕಾಂಕ್ರೀಟ್ ಕಾಡುಗಳಲ್ಲಿ ತ್ಯಾಜ್ಯಗಳ ಒಟ್ಟಿಗೆ ನರಕ ಸದೃಶವಾಗಿ ಜೀವಿಸುವ ದುರಂತವಿದೆ.

ಸೃಷ್ಟಿಯ ಯಾವುದೇ ಜೀವಿಗೆ ನೋವು-ಸಾವು ಉಂಟು ಮಾಡಿದರೆ, ಅದರ ಪಾಪ ನಮ್ಮನ್ನು ತಟ್ಟುತ್ತದೆ. ಅವುಗಳಿಗೆ ಸಂತೋಷವಿತ್ತರೆ ಆ ಪುಣ್ಯದ ಸತ್ಪಲ ನಮಗೆ ಲಭಿಸುತ್ತದೆ ಎನ್ನುವ ಶಾಶ್ವತ ಸತ್ಯವೇ ವೇದಗಳ ಅನುಪಮ ಸಾರವಾಗಿದೆ ಎಂದು ಶ್ರೀಗಳು ಆಶೀರ್ವದಿಸಿ ಅನುಗ್ರಹಿಸಿದರು.

ಚಾತುರ್ವಸ್ಯ ಸಮಿತಿ ಅಧ್ಯಕ್ಷ ಯು.ಎಸ್. ಗಣೇಶ ಭಟ್ಟ, ಕಾರ್ಯಾಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರ.ಕಾರ್ಯದರ್ಶಿ ನೀಲಕಂಠ ಯಾಜಿ, ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಕಾರ್ಯನಿರ್ವಹಣಾಧಿಕಾರಿ ಟಿ.ಜಿ. ಪ್ರಸನ್ನಕುಮಾರ, ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ ಮುಂತಾದವರಿದ್ದರು.