ಜಿಲ್ಲೆ

ಶಿರಸಿಗೆ ಬಂದ ಗೋಲ್ಡನ್ ಸ್ಟಾರ್ ಗಣೇಶ, ಪುನರುಜ್ಜೀವನಗೊಂಡ ಕೆರೆ ಲೋಕಾರ್ಪಣೆ

ಶಿರಸಿ: ತಾಲೂಕಿನ ಕರಸುಳ್ಳಿ ಗ್ರಾಮದಲ್ಲಿ ಶಿರಸಿ ಜೀವಜಲ ಕಾರ್ಯಪಡೆ ವತಿಯಿಂದ ಪುನರುಜ್ಜೀವನಗೊಂಡ ಕೆರೆಯನ್ನು ಚಿತ್ರನಟ ಗೋಲ್ಡನ್ ಸ್ಟಾರ್ ಗಣೇಶ ಗುರುವಾರ ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಅವರು, ಪರಿಸರವನ್ನು ಪ್ರೀತಿಸುವುದರಿಂದ ಅದು ಜೀವಸಂಕುಲಕ್ಕೆ ಹೆಚ್ಚಿನ ಅನುಕೂಲ ನೀಡುತ್ತದೆ. ಹೀಗಾಗಿ ಪರಿಸರಕ್ಕೆ ಒಳಿತನ್ನು ಮಾಡಬೇಕು ಎಂದು ನಟ ಗಣೇಶ ಹೇಳಿದರು.

ಶ್ರೀನಿವಾಸ ಹೆಬ್ಬಾರ ಅವರು ಪರಿಸರಕ್ಕೆ, ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ಅವರು ಮಾಡುವ ಕೆಲಸಗಳು ನಾಲ್ಕಾರು ಜನರಿಗೆ ಪ್ರೇರಣೆಯಾಗಲಿದೆ. ಪ್ರಕೃತಿಗೆ ನಾವು ಏನು ಕೊಡುತ್ತೇವೆಯೋ ನಮಗೆ ಅದನ್ನೇ ನೀಡುತ್ತದೆ. ಪರಿಸರಕ್ಕೆ ನಮ್ಮಿಂದ ಕೈಲಾದಷ್ಟು ಒಳಿತು ಬಯಸೋಣ ಎಂದರು.

ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಮಾತನಾಡಿ, ಮಾನವತ್ವದ ಸೆಲೆ ಚಿಗುರಿದಾಗ ಅದು ದೈವತ್ವಕ್ಕೆ ಏರುತ್ತದೆ. 2016ರಲ್ಲಿ ಮಳೆಯ ಅಭಾವದಿಂದ ನೀರಿನ ಸಮಸ್ಯೆ ಶಿರಸಿಯಲ್ಲಿ ಉಂಟಾಗಿತ್ತು. ಜಲಮೂಲಗಳನ್ನು ಮರೆತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದು ಹಲವರು ಅಭಿಪ್ರಾಯ ತಿಳಿಸಿದ್ದರು.

ನಂತರ ಹಲವು ಬಾರಿ ಚರ್ಚೆ ನಡೆಸಿ 2017ರ ಯುಗಾದಿ ದಿನದಂದು ಆನೆಹೊಂಡ ಕೆರೆಯನ್ನು ಹೂಳೆತ್ತುವ ಮೂಲಕ ಕೆಲಸ ಪ್ರಾರಂಭ ಮಾಡಲಾಯಿತು ಎಂದರು.

ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮಾತನಾಡಿ, ಮಾರ್ಚ್ 25ರಂದು ಕರಸುಳ್ಳಿ ಕೆರೆ ಅಭಿವೃದ್ಧಿ ಕೆಲಸವನ್ನು ಪ್ರಾರಂಭ ಮಾಡಿದ್ದೇವು. ಸತತ 45 ದಿನ ಕೆಲಸ ಮಾಡಿ ಗ್ರಾಮಸ್ಥರಿಗೆ ಹಸ್ತಾಂತರ ಮಾಡಿದ್ದೇವೆ ಎಂದರು.
ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಒಬ್ಬ ವ್ಯಕ್ತಿಗೆ ಸಂಕಲ್ಪ ಶಕ್ತಿ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಶ್ರೀನಿವಾಸ ಹೆಬ್ಬಾರ ಉದಾಹರಣೆಯಾಗಿದ್ದಾರೆ ಎಂದರು.

ಕರಸುಳ್ಳಿ ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಶ್ರೀನಿವಾಸ ಹೆಬ್ಬಾರ ದಂಪತಿಯನ್ನು ಸನ್ಮಾನಿಸಲಾಯಿತು. ಉದ್ಯಮಿ ಧರ್ಮೇಶ, ಶಿರಸಿ ಉಪವಿಭಾಗಾಧಿಕಾರಿ ದೇವರಾಜ ಆರ್., ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಕೇಶವ ಹೆಗಡೆ,.ಡಿ. ಆರ್. ಭಟ್ ಉಪಸ್ಥಿತರಿದ್ದರು.