ಹನೂರಿನಲ್ಲಿ ತಳ್ಳುವ ಗಾಡಿಯಲ್ಲಿ ಸೊನೆ ಅವರೆಕಾಯಿಯನ್ನು ಮಾರಾಟ ಮಾಡಲಾಗುತ್ತಿದ್ದು, ಜನರು ಖರೀದಿಸುತ್ತಿರುವುದು. 
ಜಿಲ್ಲೆ

ಹನೂರಿನಲ್ಲಿ ಸೊನೆ ಅವರೆಕಾಯಿ ಘಮಲು

ಹನೂರು: ತಾಲೂಕಿನಾದ್ಯಂತ ಫೆಂಗಲ್ ಚಂಡ ಮಾರುತದ ಮಳೆಯಿಂದಾಗಿ ಚಳಿಯ ವಾತವರಣ ನಿರ್ಮಾಣವಾಗಿದೆ. ಈ ನಡುವೆ ಪಟ್ಟಣದ ಮಾರುಕಟ್ಟೆಗೆ ಘಮಲಿನಿಂದ ಕೂಡಿರುವ ಸೊನೆ ಅವರೆಕಾಯಿ ಲಗ್ಗೆ ಇಟ್ಟಿದ್ದು, ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇದರಿಂದ ಬೇಡಿಕೆ ಹೆಚ್ಚಾಗಿದೆ.

ತಾಲೂಕಿನ ಗಾಣಿಗಮಂಗಲ, ಬಂಡಳ್ಳಿ, ಶಾಗ್ಯ, ಬೂದಬಾಳು, ಚಿಕ್ಕಲ್ಲೂರು, ಬಾಳಗುಣಸೆ ಹಾಗೂ ತೆಳ್ಳನೂರು ಗ್ರಾಮಗಳಲ್ಲಿನ ಮಳೆಯಾಶ್ರಿತ ಖುಷ್ಕಿ ಜಮೀನಿನಲ್ಲಿ ಹೆಚ್ಚಿನ ರೈತರು ಪ್ರತಿ ವರ್ಷ ಅವರೆಕಾಯಿಯನ್ನು ಬೆಳೆಯುತ್ತಾರೆ. ಈ ಅವರೆಯು ಸೊನೆಯ ಘಮಲಿನಿಂದ ಕೂಡಿದ್ದು, ಜನರು ಹೆಚ್ಚು ಇಷ್ಟಪಡುತ್ತಾರೆ. ಆದರೆ ಕಳೆದ ವರ್ಷ ಮಳೆಯಿಲ್ಲದ ಪರಿಣಾಮ ಅವರೆಕಾಯಿ ಬೆಳೆಯುವವರ ಸಂಖ್ಯೆ ಕ್ಷೀಣಿಸಿತ್ತು. ಆದರೆ ಈ ಬಾರಿ ಆರಂಭದಲ್ಲಿ ಉತ್ತಮ ಮಳೆಯಾದ್ದರಿಂದ ಈ ಭಾಗದ ಬಹುತೇಕ ರೈತರು ಅವರೆಯನ್ನು ಬಿತ್ತನೆ ಮಾಡಿದ್ದರು. ಇದೀಗ ಕೆಲವೊಂದು ಜಮೀನುಗಳಲ್ಲಿ ಅವರೆಕಾಯಿ ಫಸಲು ಬಂದಿದ್ದು, ಕಳೆದ 2 ದಿನಗಳಿಂದ ಹನೂರಿನ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸುತ್ತಮುತ್ತಲ ಹಳ್ಳಿಯ ಜನರು ಖರೀದಿಸುತ್ತಿರುವುದರಿಂದ ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ. ಹಾಗಾಗಿ ಸೊನೆ ಅವರೆಕಾಯಿಗೆ ಎಲ್ಲಿಲ್ಲದ ಬೇಡಿಕೆ ಉಂಟಾಗಿದೆ.

ಸೊನೆ ಅವರೆಕಾಯಿಗೆ ಎಲ್ಲಿಲ್ಲದ ಬೇಡಿಕೆ: ಹನೂರಿನಲ್ಲಿ ಪ್ರತಿ ವರ್ಷ ಅವರೆಕಾಯಿ ಕೆ.ಜಿ.ಗೆ 30 ರಿಂದ 40 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಇದೀಗ ತಾನೇ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಜನರು ಬಾಯಿ ನೀರಿರಿಸುವ ಸೊನೆ ಅವರೆಗೆ ಎಲ್ಲಿಲ್ಲದ ಬೇಡಿಕೆ ನಿರ್ಮಾಣವಾಗಿದೆ. ಹಾಗಾಗಿ ಕೆ.ಜಿ. ಅವರೆಕಾಯಿ 70 ರೂ.ಗೆ ಮಾರಾಟವಾಗುತ್ತಿದೆ. ರೈತರು ಪಟ್ಟಣಕ್ಕೆ ತಂದು ಮಾರಾಟ ಮಾಡುತ್ತಿದ್ದಾರೆ. ಚಳಿಯ ವಾತಾವರಣ ಇರುವುದರಿಂದ ಬೆಲೆ ಹೆಚ್ಚಿದ್ದರೂ ಜನರು ಖರೀದಿಸುವಲ್ಲಿ ನಿರತರಾಗಿದ್ದಾರೆ. ಇದರಿಂದ ಪಟ್ಟಣದಲ್ಲಿ ಕೆಲವರು ಅವರೆಕಾಯಿ ವ್ಯಾಪಾರದಲ್ಲಿ ತೊಡಗಿದ್ದು, ಒಂದಿಷ್ಟು ಹಣವನ್ನು ಸಂಪಾದಿಸುವಲ್ಲಿ ತೊಡಗಿದ್ದಾರೆ. ಬಹುತೇಕರು ತಳ್ಳುವ ಗಾಡಿಗಳಲ್ಲಿ ಅವರೆಕಾಯಿಯನ್ನು ಮಾರಾಟ ಮಾಡುತ್ತಿದ್ದು, ಸಂಜೆಯಾಗುತ್ತಿದ್ದಂತೆಯೇ ಖಾಲಿಯಾಗುತ್ತಿದೆ. ಇತ್ತ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಹಾಗೂ ಇನ್ನಿತರ ಕಡೆಗಳಿಂದ ಮ.ಬೆಟ್ಟಕ್ಕೆ ಆಗಮಿಸಿ ಊರಿಗೆ ಹಿಂತಿರುಗುತ್ತಿರುವ ಭಕ್ತರು ಕಾರನ್ನು ನಿಲ್ಲಿಸಿ ಅವರೆಕಾಯಿಯನ್ನು ಖರೀದಿಸುತ್ತಿರುವುದು ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ.

ಜಮೀನುಗಳಲ್ಲಿಯೇ ಖರೀದಿ: ಚಿಕ್ಕಲ್ಲೂರು, ತೆಳ್ಳನೂರು, ಕೊತ್ತನೂರು, ಬಂಡಳ್ಳಿ, ಶಾಗ್ಯ, ಗಾಣಿಗಮಂಗಲ, ಬೂದುಬಾಳು ಈ ಭಾಗಗಳಲ್ಲಿ ರೈತರು ಹೆಚ್ಚಾಗಿ ಅವರೆಕಾಯಿಯನ್ನು ಬೆಳೆದಿದ್ದಾರೆ. ಇದನ್ನು ಮನಗಂಡ ವ್ಯಾಪಾರಿಗಳು ಅವರೆಕಾಯಿ ಬೆಳೆದ ರೈತರ ಜಮೀನುಗಳಿಗೆ ನೇರವಾಗಿ ತೆರಳಿ ಅಲ್ಲಿಯೇ ಅವರೆಕಾಯಿಯನ್ನು ಖರೀಸುತ್ತಿದ್ದಾರೆ. ಕೆಲ ರೈತರು ಜಮೀನುಗಳಲ್ಲಿ ಬೆಳೆದ ಅವರೆಕಾಯಿಯನ್ನು ತಾವೇ ಸ್ವತಃ ಬಿಡಿಸಿಕೊಂಡು ನೇರವಾಗಿ ಮಾರಾಟ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಹಾಗಾಗಿ ಹನೂರಿನಲ್ಲಿ ಸೊನೆ ಅವರೆಕಾಯಿ ಘಮಲು ಹೆಚ್ಚಾಗಿದ್ದು, ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ.