ಅರಕಲಗೂಡು: ಪಟ್ಟಣದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು.
ರಥೋತ್ಸವ ಅಂಗವಾಗಿ ದೇವಾಲಯದಲ್ಲಿ ಕೆಲ ದಿನಗಳಿಂದ ದೇವರ ಉತ್ಸವ, ಕಲ್ಯಾಣೋತ್ಸವ ಸೇವೆ ಸೇರಿದಂತೆ ವಿವಿಧ ಪೂಜಾ ವಿಧಾನಗಳನ್ನು ವಿಧಿವತ್ತಾಗಿ ನೆರವೇರಿಸಲಾಯಿತು.
ಬೆಳಗ್ಗೆ ಅಭಿಷೇಕ, ಸೂರ್ಯ ಮಂಡಲೋತ್ಸವ, ವಿಶೇಷ ಪೂಜಾ ಕೈಂಕರ್ಯಗಳನ್ನು ಮಾಡಲಾಯಿತು. ಬಳಿಕ ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಅಡ್ಡಮೇಲೆ ಹೊತ್ತು ಭಕ್ತರು ರಥ ಬೀದಿಗಳಲ್ಲಿ ಸಾಗಿದರು. ಭಕ್ತರು ಹಣ್ಣು ಕಾಯಿ ಪೂಜೆ ಅರ್ಪಿಸಿದರು. ಉತ್ಸವದ ಹಿಂದೆ ವಿಪ್ರ ಸಮುದಾಯದವರು ದೇವರ ಭಜನೆ ನಡೆಸಿದರು.
ಉತ್ಸವ ಪ್ರದಕ್ಷಿಣೆ ನಂತರ ಮಧ್ಯಾಹ್ನ ಶುಭ ಮುಹೂರ್ತದಲ್ಲಿ ಅಲಂಕೃತ ರಥದ ಮೇಲೆ ಉತ್ಸವಮೂರ್ತಿ ಕೂರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಜಯಘೋಷಗಳೊಂದಿಗೆ ತೇರು ಎಳೆದು ಸಂಭ್ರಮಿಸಿದರು. ಭಕ್ತರು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.