ಜಿಲ್ಲೆ

ವಿಜೃಂಭಣೆಯ ಶ್ರೀ ರಂಗನಾಥಸ್ವಾಮಿ ರಥೋತ್ಸವ

ಅರಕಲಗೂಡು: ಇತಿಹಾಸ ಪ್ರಸಿದ್ಧ ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಆದಿಚುಂಚನಗಿರಿ ಮಠದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ದಿವ್ಯ ರಥೋತ್ಸವ ಶುಕ್ರವಾರ ಸಡಗರ ಸಂಭ್ರಮದಿಂದ ಜರುಗಿತು.

ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಕೊಡಗು ಹಾಗೂ ಹಾಸನದ ಆದಿಚುಂಚನಗಿರಿ ಮಠಾಧೀಶ ಶ್ರೀ ಶಂಭುನಾಥ ಸ್ವಾಮೀಜಿ, ಕಬ್ಬಳಿ ಶಿವಪುತ್ರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು.

ಶುಕ್ರವಾರ ಬೆಳಗ್ಗೆಯಿಂದ ದೇವಸ್ಥಾನದಲ್ಲಿ ಮೂಲ ದೇವರಿಗೆ ಅಭಿಷೇಕ, ಹೋಮ ವಿಶೇಷ ಪೂಜಾ ಕಾರ್ಯಗಳನ್ನು ವಿಧಿವತ್ತಾಗಿ ನಡೆದವು. ಶ್ರೀ ರಂಗನಾಥಸ್ವಾಮಿ ದೇವರು ಮಾತ್ರವಲ್ಲದೇ ಶ್ರೀದೇವಿ ಭೂದೇವಿ ಮಾತೆಯರಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ವಿಧಾನಗಳನ್ನು ಪೂರೈಸಲಾಯಿತು.

ಶುಭ ಮುಹೂರ್ತದಲ್ಲಿ ಸಂಜೆ ವೇಳೆಗೆ ದೇವಸ್ಥಾನ ಮುಂಭಾಗ ಸಿಂಗರಿಸಿದ್ದ ರಥಕ್ಕೆ ದೇವರ ಉತ್ಸವ ಮೂರ್ತಿಯನ್ನು ಹೊರತಂದು ಪ್ರದಕ್ಷಿಣೆ ಹಾಕಿಸುವ ಮೂಲಕ ರಥಾರೋಹಣ ಮಾಡಲಾಯಿತು. ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಶ್ರೀ ಶಂಭುನಾಥ ಸ್ವಾಮೀಜಿ ಅವರು ಬಾಳೆ ಕಂದು ಕಡಿದು ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ರಂಗನಾಥಸ್ವಾಮಿ ಜಯ ಘೋಷಣೆಗಳನ್ನು ಕೂಗುತ್ತಾ ತೇರು ಎಳೆಯಲು ಆರಂಭಿಸಿದರು. ದೇವಸ್ಥಾನ ಮುಂಭಾಗ ಹರ್ಷೋದ್ಗಾರದೊಂದಿಗೆ ತೇರು ಎಳೆದು ಭಕ್ತಿ ಭಾವ ಪ್ರದರ್ಶಿಸಿದರು.

ಜಾತ್ರಾ ಮಹೋತ್ಸವದ ಸುತ್ತಮುತ್ತಲಿನ ಹಳ್ಳಿಗಳ ಸಹಸ್ರಾರು ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.