ಕೊಳ್ಳೇಗಾಲ: ತಾಲೂಕಿನ ಚಿಲಕವಾಡಿ ಗ್ರಾಮದಲ್ಲಿ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ಮತ್ತು ದುರ್ಗಾ ಪರಮೇಶ್ವರಿ ದೇವಿಯ ಕುರ್ಜಿನ ಉತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಕಾರ್ತಿಕ ಮಾಸದ ಮೂರನೇ ವಾರದ ಪ್ರಯುಕ್ತ ಪ್ರತಿ ವರ್ಷ ನಡೆಯುವ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ಮತ್ತು ದುರ್ಗಾ ಪರಮೇಶ್ವರಿ ಕುರ್ಜಿನ ಉತ್ಸವ ಈ ಬಾರಿಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ನೆರವೇರಿತು. ಚಿಲಕವಾಡಿ, ಕುಂತೂರು, ಕೆ.ಹೊಸೂರು, ಕೆಸ್ತೂರು ಸೇರಿದಂತೆ ಸುತ್ತಮುತ್ತಲ 15 ಗ್ರಾಮಗಳ ಜನರು ಭಾಗವಹಿಸಿದ್ದರು.
ಸೋಮವಾರ ರಾತ್ರಿ ಚಿಲಕವಾಡಿ ಗ್ರಾಮಸ್ಥರು ತಯಾರಿಸಿದ್ದ ಬೊಂಬಿನ ಬಿದಿರಿಗೆ ಕುರ್ಜಿಗೆ ವಿವಿಧ ಬಗೆಯ ಹೂ ಹಾಗೂ ದೀಪಾಲಂಕಾರ ಮಾಡಿ ಶೃಂಗರಿಸಲಾಗಿತ್ತು. ರಾತ್ರಿ 1 ಗಂಟೆಯಲ್ಲಿ ಗ್ರಾಮದಿಂದ ಸಿದ್ಧವಿದ್ದ ಕುರ್ಜನ್ನು ಗ್ರಾಮದ ಹೊರವಲಯದಲ್ಲಿರುವ ಶ್ರೀ ಶಂಭುಲಿಂಗೇಶ್ವರ ದೇವಾಲಯಕ್ಕೆ ತರಲಾಯಿತು.
ಸಂಪ್ರದಾಯದಂತೆ ಶ್ರೀ ಶಂಭುಲಿಂಗೇಶ್ವರ ಮತ್ತು ದುರ್ಗಾಪರಮೇಶ್ವರಿ ಉತ್ಸವ ಮೂರ್ತಿಯನ್ನು ಕುರ್ಜಿನಲ್ಲಿ ಪ್ರತಿಷ್ಠ್ಠಾಪಿಸಲಾಯಿತು. ಸಮೀಪದಲ್ಲಿದ್ದ ಬನ್ನಿ ಮರದ ಬಳಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಬಳಿಕ ಚಿಲಕವಾಡಿ ಗ್ರಾಮಕ್ಕೆ ಮಂಗಳವಾರ ಬೆಳಗ್ಗೆ 5 ಗಂಟೆ ಸಮಯಕ್ಕೆ ಕುರ್ಜಿನ ಉತ್ಸವವನ್ನು ಗ್ರಾಮಸ್ಥರು ಹೊತ್ತು ತಂದರು.
ಈ ವೇಳೆ ಗ್ರಾಮಕ್ಕೆ ಆಗಮಿಸಿದ ಉತ್ಸವ ಮೂರ್ತಿಗೆ ಗ್ರಾಮದ ಮಹಿಳೆಯರು ಹಣ್ಣು ಕಾಯಿ ಸಮೇತ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಬಳಿಕ ಹಣ್ಣು-ದವನ, ನಾಣ್ಯಗಳನ್ನು ಕುರ್ಜಿನ ಮೇಲೆ ಎಸೆಯುವ ಮೂಲಕ ಭಕ್ತರು ತಮ್ಮ ಹರಕೆ ತೀರಿಸಿದರು. ಗ್ರಾಮದ ಪ್ರಮುಖ ರಸ್ತೆಯಲ್ಲಿ ಉತ್ಸವ ನಡೆಯಿತು. ಯುವಕರು ವಾದ್ಯ ಮೇಳಕ್ಕೆ ಕುಣಿದು ಕುಪ್ಪಳಿಸಿದರು.
ದೀಪಾಲಂಕಾರ: ಶ್ರೀ ಶಂಭುಲಿಂಗೇಶ್ವರ ಹಾಗೂ ದುರ್ಗಾ ಪರಮೇಶ್ವರಿ ಜಾತ್ರಾ ಮಹೋತ್ಸವ ಹಿನ್ನೆಲೆ ಚಿಲಕವಾಡಿ ಗ್ರಾಮದ ಎಲ್ಲ ಬೀದಿಗಳು ದೀಪಾಲಂಕಾರ, ಹಸಿರುತೋರಣ ಕಂಗೊಳಿಸುತ್ತಿತ್ತು.