ಚಿಕ್ಕ ಹೊನ್ನೂರು ಸಮೀಪದ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಜಾತ್ರಾಮಹೋತ್ಸವ ಅದ್ದೂರಿಯಾಗಿ ನಡೆಯಿತು. 
ಜಿಲ್ಲೆ

ವಿಜೃಂಭಣೆಯ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ

ಬೈಲಕುಪ್ಪೆ: ಚಿಕ್ಕಹೊನ್ನೂರು ಸಮೀಪದ ಹೊನ್ನೂರಪ್ಪ ಬೆಟ್ಟದಲ್ಲಿ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.

ಈ ಬಾರಿಯೂ ಎಂದಿನಂತೆ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರದಿಂದ ಪೂಜಾ ಕಾರ್ಯಕ್ರಮ ವಿಶೇಷವಾಗಿ ನಡೆಯಿತು. ಬೆಟ್ಟದ ಮೇಲಿರುವ ದೇವಾಲಯ ಆವರಣವನ್ನು ಗ್ರಾಮಸ್ಥರು ಸ್ವಚ್ಛಗೊಳಿಸಿ ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು.

ಅರ್ಚಕ ವಿಠಲ ನೇತೃತ್ವದ ತಂಡದ ಹೊನ್ನೂರಪ್ಪನ ವಿಗ್ರಹಕ್ಕೆ ಹಾಲು ತುಪ್ಪ ನೈವೇದ್ಯ ಮಾಡಿ ವಿವಿಧ ಹೋಮ ನೆರವೇರಿಸಿತು. ಬೆಟ್ಟದ ಪಕ್ಕದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಅರ್ಚಕ ರಘು ನೇತೃತ್ವದ ತಂಡದ ಆಂಜನೇಯ ವಿಗ್ರಹಕ್ಕೆ ಪೂಜೆ ಮಾಡಿ ಮಹಾಮಂಗಳಾರತಿ ನೆರವೇರಿಸಿತು. ಭಕ್ತರು ದಾನವಾಗಿ ದೇವಾಲಯಕ್ಕೆ ನೀಡಿದ್ದ ನವಗ್ರಹಗಳ ವಿಗ್ರಹಗಳಿಗೆ ಅರ್ಚಕ ತಂಡ ವಿಶೇಷ ಪೂಜೆ ನೆರವೇರಿಸಿತು.

ಚಿಕ್ಕಹೋನೂರು ಗ್ರಾಮದ ಮುಖಂಡರಾದ ಬಾಬು, ಇಂಜಿನಿಯರ್ ಕುಮಾರ್, ಬೈರಪ್ಪ, ನರಸಿಂಹ, ದೊಡ್ಡಯ್ಯ, ಮಂಜು, ಗ್ರಾ ಪಂ ಅಧ್ಯಕ್ಷ ರಘು, ಸದಸ್ಯರಾದ ನವೀನ್‌ಕುಮಾರ, ರಘು, ಮಾಜಿ ಸದಸ್ಯ ಮಂಜುನಾಥ್ ಹಲವರು ಹಾಜರಿದ್ದರು.

ಬೈಲಕುಪ್ಪೆ ಪಿಎಸ್‌ಐ ಅಜಯ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.