ಜಿಲ್ಲೆ

ಗೊಂದಲದ ಗೂಡಾದ ಪುರಸಭೆಯ ಸಾಮಾನ್ಯ ಸಭೆ

ಎಚ್.ಡಿ.ಕೋಟೆ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಶಿವಮ್ಮ ಚಾಕಳ್ಳಿ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆ ಕೇವಲ ಸದಸ್ಯರ ವಾಕ್ಸಮರಕ್ಕೆ ಸೀಮಿತವಾಯಿತು.

ಮುಖ್ಯಾಧಿಕಾರಿ ಸಭೆ ನಡವಳಿ ಓದಲು ಪ್ರಾರಂಭಿಸುತ್ತಿದಂತೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಐಡಿಯಾ ವೆಂಕಟೇಶ್ ಮಾತನಾಡಿ, ನನ್ನ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಕೈಗೊಂಡ ಅನೇಕ ಕಾಮಗಾರಿಗಳಿಗೆ, ಮೀಸಲಿಟ್ಟ 1.25 ಕೋಟಿ ರೂ. ಹಣದಲ್ಲಿ, 65 ಲಕ್ಷ ರೂ. ಹಣವನ್ನು ಕಾಮಗಾರಿಗಳಿಗೆ ಹೊರತುಪಡಿಸಿ, ಉಳಿಕೆ ಹಣ ಏನಾಯ್ತು ಎಂದು ಪ್ರಶ್ನಿಸಿ ಕಳೆದ ಅವಧಿಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದ ಅಭಿವೃದ್ಧಿ ವಿಷಯಗಳನ್ನು ಈ ಸಭೆಯಲ್ಲಿ ತರದೆ ಇರುವ ಬಗ್ಗೆ ಮುಖ್ಯ ಅಧಿಕಾರಿ ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಏಳು ವರ್ಷಗಳ ಹಿಂದೆ ಮಳಿಗೆಗಳನ್ನು ನಿರ್ಮಾಣ ಮಾಡಲು ಸುಮಾರು 17ಲಕ್ಷ ರೂ. ಅನುದಾನ ನಿಗದಿ ಮಾಡಲಾಗಿತ್ತು. ಆದರೂ ಕೂಡ ಏಕೆ ಕಾಮಗಾರಿ ಮಾಡಿಲ್ಲ. ಮಳಿಗೆ ನಿರ್ಮಿಸಿದ್ದರೆ ಪುರಸಭೆಗೆ ಆದಾಯ ಬರುತ್ತಿತ್ತು. ನೀವು ಪುರಸಭಾ ಮುಖ್ಯಾಧಿಕಾರಿಯಾಗಿ ಬಂದಾಗಿನಿಂದ ಒಂದೇ ಒಂದು ಅಭಿವೃದ್ಧಿ ಕಾಮಗಾರಿ ಮಾಡಿಲ್ಲ ಎಂದು ದೂರಿದರು.

ಇದಕ್ಕೆ ಧ್ವನಿಗೂಡಿಸಿದ ಇತರೆ ಸಹೋದ್ಯೋಗಿಗಳಾದ ಸದಸ್ಯ ಮಿಲ್ ನಾಗರಾಜು, ರಾಜು ವಿಶ್ವಕರ್ಮ, ಹರೀಶ್ ಗೌಡ, ನಂಜಪ್ಪ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಈ ಸಭೆಯಲ್ಲಿ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದರು.

ಇನ್ನುಳಿದ ಸದಸ್ಯರಾದ ಎಚ್.ಸಿ. ನರಸಿಂಹಮೂರ್ತಿ, ಮಧು, ಸೋಮಶೇಖರ್, ಶಾಂತಮ್ಮ ಮಾತನಾಡಿ, ಕೇವಲ ಈ ವಿಚಾರವನ್ನೇ ಮುಂದಿಟ್ಟುಕೊಂಡು ಸಭೆ ಅಂತ್ಯ ಮಾಡುವುದು ಬೇಡ. ಈ ವಿಚಾರವನ್ನು ಮುಂದಿನ ಸಭೆಯಲ್ಲಿ ಚರ್ಚೆ ಮಾಡೋಣ. ಈ ಸಭೆಯಲ್ಲಿ ನಡಾವಳಿಯಂತೆ ಸಭೆ ನಡೆಸಿ ಎಂದು ಸದಸ್ಯರು ಪಟ್ಟು ಹಿಡಿದರು. ನಂತರ ಸಭೆ ಆರಂಭಗೊಂಡಿತು.

ಸದಸ್ಯ ಎಚ್.ಸಿ. ನರಸಿಂಹಮೂರ್ತಿ ಮಾತನಾಡಿ, ಎರಡು ವರ್ಷದಿಂದ ಪುರಸಭಾ ಆಡಳಿತ ಮಂಡಳಿ ಇಲ್ಲದಿದ್ದ ಸಂದರ್ಭದಲ್ಲಿ ಆಡಳಿತಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಪಟ್ಟಣ ಅಭಿವೃದ್ಧಿಪಡಿಸಲು ಎಷ್ಟು ಸಭೆ ನಡೆಸಲಾಗಿದೆ. ತೆರಿಗೆ ಹಣದಲ್ಲಿ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀರಾ ಈ ಬಗ್ಗೆ ಸಭೆಗೆ ಮಾಹಿತಿ ನೀಡಿ, ಅಧಿಕಾರಿಗಳು ಸಾರ್ವಜನಿಕರ ತೆರಿಗೆ ಹಣದಲ್ಲಿ ದರ್ಬಾರ್ ಮಾಡುವುದಕ್ಕೆ ಅಷ್ಟೇ ಲಾಯಕ್ ಆಗಿದ್ದೀರಾ ಎಂದು ಪುರಸಭಾ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಸಾರ್ವಜನಿಕರ ತೆರಿಗೆ ಹಣದಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಅವುಗಳು ನಾಯಿ ನರಿ ವಾಸಮಾಡಲು ನಿರ್ಮಿಸಿದಂತಿದೆ. ಇದರಿಂದ ಪುರಸಭೆಗೆ ಯಾವುದೇ ಲಾಭ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜು ವಿಶ್ವಕರ್ಮ ಮಾತನಾಡಿ, ಸಾಮಾನ್ಯ ಸಭೆ ನಡೆಯುವುದಕ್ಕೆ ಒಂದು ವಾರದ ಮುಂಚೆ ಸದಸ್ಯರಿಗೆ ನೋಟಿಸ್ ನೀಡಬೇಕು. ಆದರೆ, ಪುರಸಭಾ ಮುಖ್ಯಾಧಿಕಾರಿಯೂ ಸಭೆ ಎರಡು ದಿನ ಇರುವಾಗ ಸದಸ್ಯರಿಗೆ ನೋಟಿಸ್ ತಲುಪಿಸಿದ್ದಾರೆ. ನೀವು ನೀಡಿರುವ ಕಡತ ಪರಿಶೀಲನೆ ಮಾಡಲು ಹದಿನೈದು ದಿನಗಳಾದರೂ ಬೇಕು. ಆದರೆ, ನೀವು ಮಾಡಿರುವ ಅಕ್ರಮಗಳನ್ನು ಮುಚ್ಚಿ ಹಾಕಲು ಈ ರೀತಿ ಮಾಡಿದ್ದೀರಾ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪುರಸಭಾ ಮುಖ್ಯಾಧಿಕಾರಿ ಸುರೇಶ್, ಪುರಸಭಾ ಅಧ್ಯಕ್ಷರು ನೂತನವಾಗಿ ಅಧಿಕಾರ ಸ್ವೀಕರಿಸಿ ತುರ್ತಾಗಿ ಸಭೆ ಕರೆಯಲು ತಿಳಿಸಿದ್ದರಿಂದ ನೋಟಿಸ್ ಜಾರಿ ಮಾಡಲು ಸಮಯ ಸಿಗಲಿಲ್ಲ. ಹಾಗಾಗಿ, ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುವುದಾಗಿ ಸಭೆಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಮಿಲ್ ನಾಗರಾಜು, ಏಳು ವರ್ಷಗಳಿಂದ ಸಾರ್ವಜನಿಕರು ಜನನ ಮರಣ ಪ್ರಮಾಣ ಪತ್ರ ಪಡೆಯಲು ಪಾವತಿ ಮಾಡಿದ ಹಣವನ್ನು ಸರ್ಕಾರದ ಖಜಾನೆಗೆ ಜಮಾ ಮಾಡದೆ ವಂಚಿಸಿದ್ದೀರಾ ಇದರ ಬಗ್ಗೆ ಸಭೆಯಲ್ಲಿ ಸೂಕ್ತ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ಐಡಿಯಾ ವೆಂಕಟೇಶ್ ಮಾತನಾಡಿದರು. ನೂತನವಾಗಿ ಪುರಸಭೆಗೆ ಸರ್ಕಾರದಿಂದ ನಾಮ ನಿರ್ದೇಶನಗೊಂಡ ಎಚ್.ಕೆ. ಪ್ರಕಾಶ್, ಸೂರ್ಯಕುಮಾರ್, ಅನಿಲ್, ಪಾರ್ಥಸಾರಥಿ, ಸೈಯದ್ ಅಬೀಬ್ ಅವರನ್ನು ಪುರಸಭಾ ಆಡಳಿತ ಮಂಡಳಿ ಅಭಿನಂದಿಸಿದರು. ಪುರಸಭಾ ಉಪಾಧ್ಯಕ್ಷ ಆಶೀಫ್ ಇಕ್ಬಾಲ್, ಪುರಸಭಾ ಮುಖ್ಯಾಧಿಕಾರಿ ಸುರೇಶ, ಪುರಸಭಾ ಸದ್ಯರಾದ ಎಚ್.ಸಿ. ನರಸಿಂಹಮೂರ್ತಿ, ದರ್ಶಿನಿ ಯಶ್ವಂತ್, ನಂದಿನಿ, ಶಾಂತಮ್ಮ, ಸರೋಜಮ್ಮ, ನಾಗಮ್ಮ, ಸುಹಾಸಿನಿ, ಕವಿತಾ, ಗೀತಾ, ಸಾಹಿರಾಬಾನು, ಅನಿತಾ, ಮಧುಕುಮಾರ್, ರಾಜು ವಿಶ್ವಕರ್ಮ, ಲೋಕೇಶ್, ನಂಜಪ್ಪ, ಪ್ರೇಮ್ ಸಾಗರ್, ಪುಟ್ಟಬಸವನಾಯಕ, ಮಿಲ್ ನಾಗರಾಜು, ಅಧಿಕಾರಿಗಳಾದ ರೇಷ್ಮಾ , ಪರಮೇಶ್, ರಘು, ಹರೀಶ್, ರಾಣಿ, ಶುಭಾಷ್, ಕೃತಿಕ್, ನಳಿನಿ, ಲಕ್ಷ್ಮಿ ದೇವಿ, ಸುಬ್ರಹ್ಮಣ್ಯ ಇದ್ದರು.