ಜಿಲ್ಲೆ

ಗಾಯತ್ರಿ ಮಂತ್ರಕ್ಕಿದೆ ಅನನ್ಯವಾದ ಶಕ್ತಿ

ವೀರೇಶ ಸೌದ್ರಿ

ಯಲ್ಲಾಪುರ: ಗಾಯತ್ರಿ ಮಂತ್ರಕ್ಕೆ ಅನನ್ಯವಾದ ಶಕ್ತಿಯಿದೆ. ನಿರಂತರ ಶ್ರದ್ಧೆ, ನಿಷ್ಠೆಯಿಂದ ಮಾಡಿದ ಜಪದಿಂದ ಸಿದ್ಧಿ ಉಂಟಾಗುತ್ತದೆ ಎಂದು ಸ್ವರ್ಣವಲ್ಲಿಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಪಟ್ಟಣದ ನಾಯಕನಕೆರೆಯ ಶ್ರೀಶಾರದಾಂಬಾ ಸಭಾಭವನದಲ್ಲಿ ಹನುಮಂತ ಗುಡಿ ಮತ್ತು ಶಾರದಾಂಬಾ ದೇವಸ್ಥಾನದ ವರ್ಧಂತಿ ಉತ್ಸವದ ಸಾನ್ನಿಧ್ಯ ವಹಿಸಿ, ನಂತರ ನಡೆದ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಸತತ ಪ್ರಯತ್ನದಿಂದ ಸಾಧನೆ ಮಾಡಬಹುದು. ಅಧ್ಯಯನ, ಜಪದಿಂದ ಶ್ರೇಷ್ಠತೆಯ ದಾರಿಯಲ್ಲಿ ಸಾಗಬಹುದು ಎಂದರು.

ಘನಪಾಠಿ ವೇ. ಮಹೇಶ ಭಟ್ಟ ಹಿತ್ತಲಕಾರಗದ್ದೆ, ಶಾರದಾಂಬಾ ದೇವಸ್ಥಾನದಲ್ಲಿ 10 ವರ್ಷಗಳ ಕಾಲ ಕಾರ್ಯದರ್ಶಿಯಾಗಿದ್ದ ಅಶೋಕ ಶೆಟ್ಟಿ, ಕವಿ ಕೃಷ್ಣ ಭಟ್ಟ ನಾಯಕನಕೆರೆ ಅವರನ್ನು ಸನ್ಮಾನಿಸಲಾಯಿತು.

ದೇವಸ್ಥಾನದ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿದರು. ಇದಕ್ಕೂ ಮುನ್ನ ಚಂಡಿಕಾಯಾಗದ ಪೂರ್ಣಾಹುತಿ ನಡೆಯಿತು. ಹನುಮಂತ ದೇವರು ಹಾಗೂ ಶಾರದಾಂಬಾ ದೇವಸ್ಥಾನದ ವರ್ಧಂತಿ ಉತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.