ಸಿರವಾರ: ಪಟ್ಟಣದ ಲಿಂಗಸುಗೂರು ರಸ್ತೆ ಪಕ್ಕದಲ್ಲಿ ಹಾಕಿರುವ ತ್ಯಾಜ್ಯಕ್ಕೆ ಬೆಂಕಿ ತಗುಲಿ ದಟ್ಟ ಹೊಗೆ ಆವರಿಸಿದ್ದರಿಂದ ಸುತ್ತಲಿನ ನಿವಾಸಿಗಳು ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.
ಪಟ್ಟಣದಲ್ಲಿ ಕಸ ವಿಲೇವಾರಿ ಘಟಕ ಇಲ್ಲದಿರುವುದರಿಂದ ಲಿಂಗಸುಗೂರು ರಸ್ತೆಯ ಪಕ್ಕದಲ್ಲಿ ಪಪಂ ಪೌರ ಕಾರ್ಮಿಕರು ಕಸ ತಂದು ಹಾಕುತ್ತಾರೆ. ಇನ್ನೂ ಪಟ್ಟಣದಲ್ಲಿರುವ ಹೇರ್ ಸಲೂನ್, ಚಿಕನ್ ಅಂಗಡಿಗಳ ತ್ಯಾಜ್ಯ ರಸ್ತೆ ಪಕ್ಕದಲ್ಲಿ ಎಸೆಯುವುದರಿಂದ ಜನ ಮೂಗು ಮುಚ್ವಿಕೊಂಡು ಓಡಾಡುವಂತಾಗಿದೆ.
ಪಕ್ಕದಲ್ಲೇ ಶಾಲೆ ಇರುವುದರಿಂದ ದುರ್ವಾಸನೆಗೆ ವಿದ್ಯಾರ್ಥಿಗಳು, ಶಿಕ್ಷಕರಿಗೆ ಕಿರಿಕಿರಿಯಾಗಿದೆ. ಭಾನುವಾರ ಕಸದ ತ್ಯಾಜಕ್ಕೆ ಬೆಂಕಿ ಹತ್ತಿಕೊಂಡಿದ್ದರಿಂದ ಮುಖ್ಯರಸ್ತೆ ಎಲ್ಲ ದಟ್ಟ ಹೊಗೆ ಅವರಿಸಿತ್ತು. ವಿಷಯ ತಿಳಿದು ಅರಕೇರಾ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದರು.
ಕಸ ವಿಲೇವಾರಿ ಮಾಡಲು ಬೇರೆಡೆ ಸ್ಥಳ ಪರಿಶೀಲನೆ ಮಾಡಲಾಗಿದೆ. ಕೆಲ ದಿನಗಳಲ್ಲಿ ತ್ಯಾಜ್ಯ ವಿಲೇವಾರಿ ಸ್ಥಳಾಂತರಿಸಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ತಪ್ಪಿಸಲಾಗುವುದು.
ವೈ.ಭೂಪನಗೌಡ
ಅಧ್ಯಕ್ಷ, ಸಿರವಾರ ಪಪಂ